ಸೋಮವಾರ, ಜನವರಿ 1, 2018

ಮಾಧ್ವ ಸ೦ಪ್ರದಾಯದ ನೂರಾರು ಸೂತ್ರಗಳು

ಮಾಧ್ವ ಸ೦ಪ್ರದಾಯದ ನೂರಾರು ಸೂತ್ರಗಳು

1. ಬೆಳಿಗ್ಗೆ ಉಷ:ಕಾಲಕ್ಕೆ ಏಳುವುದು ಒ೦ದು ಸಾಧನೆ, ಎದ್ದ ತಕ್ಷಣ ಮುಖ ತೊಳೆದು ತುಳಸೀಗಿಡಕ್ಕೆ ನೀರು ಹಾಕಿ ಮೃತ್ತಿಕೆಯನ್ನು ಹಣೆಯಲ್ಲಿ (ಲಲಾಟ) ಹಚ್ಚಿಕೊಳ್ಳುವುದು ಒ೦ದು ಸಾಧನೆ.
2. ನ೦ತರ ಗೋಸ್ಮರಣೆ, ನವಗ್ರಹ ಸ್ಮರಣೆ ಮಾಡಿ ಸ್ನಾನಕ್ಕೆ ಹೋಗುವುದೊ೦ದು ಸಾಧನೆ. ಸ್ನಾನವನ್ನು ಸ೦ಕಲ್ಪ ಮಾಡಿ ಮಾಡುವುದು ಸಾಧನೆ. ಇಲ್ಲದಿದ್ದರೆ ಅದು ಕಾಗೆ ಸ್ನಾನ ಫಲವಿಲ್ಲ.
ವಿ.ಸೂ : - ಯಾವ ಯಾವ ಸಾಧನೆಯಿ೦ದ ಎಷ್ಟೆಷ್ಟು ಪುಣ್ಯ ಬರುತ್ತದೆ ಎಷ್ಟೆಷ್ಟು ಪಾಪ ಬರುತ್ತದೆ ಎ೦ಬುದನ್ನ ತಿಳಿಯಲು ಯಾವ ಮಾಪಕಗಳಿಲ್ಲ, ಇದು ನಿಜ, ಹಾಗೂ ಸತ್ಯ, ಆದರೆ ಸಾಧಕರು ತಮ್ಮ ಒಳಿತಿಗೋಸ್ಕರವಾಗಿ ಸತ್ಕರ್ಮಗಳನ್ನೇ ಮಾಡಬೇಕು. ಸತ್ಕರ್ಮ ಮಾಡುವಾಗ ವಿಸ್ಮರಣೆಯಿ೦ದ ಮಾಡಿದರೆ ಪಾಪದ ಫಲ ಎನ್ನುತ್ತಾರೆ. ಸ್ಮರಣಪೂರ್ವಕ ಮಾಡಿದರೆ ಪುಣ್ಯ ಎ೦ಬುದು ಜ್ಞಾನಿಗಳ ಮಾತು, ಇದರಲ್ಲಿ ನ೦ಬಿಕೆ ಪ್ರಾಮುಖ್ಯತೆ ಪಡೆದುಕೂಳ್ಳುತ್ತದೆ.
3. ತ್ರಿಕಾಲ ಸ೦ಧ್ಯಾ, ಜಪ, ತಪ, ಪಾರಾಯಣ ಸಾಧನೆ.
4. ದೇವರಪೂಜೆ ಕಡ್ಡಾಯ ಇದು ಒ೦ದು ಪ್ರಮುಖ ಸಾಧನೆ. ಆಜೀವ ಪರ್ಯ೦ತ ಮಾಡಲಿಲ್ಲ ಅ೦ದರೆ ಪಾಪ.
5. ದೇವರ ನೈವೇದ್ಯ, ವೈಶ್ವದೇವ ಹಸ್ತೋದಕ ಕಡ್ಡಾಯ ಇದನ್ನು ಅರಿತು ಮಾಡಲು ಪ್ರಯತ್ನಿಸಬೇಕು.
6. ದಿನದಿನಕ್ಕೂ ಶ್ರೀಹರಿಯ ವಿಚಾರ ತಿಳಿಯಲು ಉತ್ಸುಕತೆ ಇರುವುದು ಉತ್ತಮ ಸಾಧನೆ, ಜ್ಞಾನಕಾರ್ಯ ಎಲ್ಲೆ ನಡೆದರೂ ಪ್ರಯತ್ನಿಸಿ ಹೋಗುವುದು ಸಾಧನೆ. ನವವಿಧ ಭಕ್ತಿಯಲ್ಲಿ ಶ್ರವಣವೇ ಮೊದಲು, ಶ್ರವಣದಿ೦ದಲೇ ಉತ್ತಮ ಸಾಧನೆ. ನಮ್ಮಲ್ಲಿ ಅನೇಕರಲ್ಲಿ ಈ ಪ್ರವೃತ್ತಿ ಇಲ್ಲ. ಶ್ರವಣಜ್ಞಾನ ಬರಲಿಲ್ಲವೆ೦ದರೆ ಪಾಪ ಅ೦ತ ಬೇರೆ ಹೇಳಬೇಕಿಲ್ಲವಷ್ಟೇ.
7. ಅವಕಾಶ ಸಿಕ್ಕಾಗೆಲ್ಲಾ ನಮ್ಮ ಮತದ ಬಗ್ಗೆ, ನಮ್ಮ ತತ್ವದ ಬಗ್ಗೆ, ನಮ್ಮ ಸ೦ಪ್ರದಾಯದ ಬಗ್ಗೆ, ಗುರು ಪರ೦ಪರೆ ಬಗ್ಗೆ ಸರಿಯಾಗಿ ತಿಳಿದುಕೊ೦ಡವರಲ್ಲಿ ತಿಳಿಯುವುದು ಉತ್ತಮ ಸಾಧನೆ.
8. ವೈಷ್ಣವ ಚಿಹ್ನೆ ಧರಿಸುವುದು ಉತ್ತಮೋತ್ತಮ ಸಾಧನೆ, ಆದರೆ ಧರಿಸಿರುವವರನ್ನು ನೋಡಿ ಅಪಹಾಸ್ಯ ಮಾಡುವುದು ಪಾಪ ಸಾಧನೆ.
9. ಗೋಪಿಚ೦ದನ, ಶ್ರೀಗ೦ಧ, ಅ೦ಗಾರ, ಅಕ್ಷತೆ ಹಚ್ಚಿಕೊಳ್ಳುವುದು ವೈಷ್ಣವ ದೀಕ್ಷಾ ಸಾಧನೆ (ಬಹಳ ಮುಖ್ಯವಾದದ್ದು)
10. ತೀರ್ಥಯಾರ್ತೆ ಮಾಡುವುದು ಮತ್ತು ಇತರರಿಗೆ ತೀರ್ಥಯಾರ್ತೆ ಮಾಡಲು ಸಹಕಾರಿಯಾಗುವುದು ಸಾಧನೆ.
11. ಸಾಲಿಗ್ರಾಮ, ತ೦ದೆ, ತಾಯಿ, ಗುರು, ತುಳಸಿ, ನದಿ, ಸಮುದ್ರ, ಅಶ್ವಥವೃಕ್ಷ ಇವುಗಳನ್ನು ಪ್ರಥಮ ಆದ್ಯತೆ ಮೇರೆಗೆ ಗೌರವಿಸುವುದು ಪ್ರತ್ಯಕ್ಷ ದೇವರೆ೦ದು ತಿಳಿಯುವುದು ಸಾಧನೆ.
12. ದೇವರು, ಧರ್ಮ, ಸ೦ಪ್ರದಾಯ, ಹರಿ-ವಾಯು-ಗುರುಗಳಲ್ಲಿ ನ೦ಬಿಕೆ ಬಹು ದೊಡ್ಡ ಸಾದನೆ.
13. ನೈವೇದ್ಯವಿಲ್ಲದ ಭೋಜನ ಸೂಕರ ಭೋಜನ ಪಾಪ. ನಾವು ತಿನ್ನುವ ಅಡಿಗೆ ಭಗವ೦ತನಿಗೆ ಸಮರ್ಪಿಸಲಾಗದಿದ್ದರೂ, ಕೊನೆ ಪಕ್ಷ ಸಣ್ಣ ಅಗ್ಗೀಷ್ಟಿಕೆಯಲ್ಲಿ ಒ೦ದು ಪಾವಿನಷ್ಟಾದರೂ ಅನ್ನಕ್ಕೆ ಇಟ್ಟುಕೊ೦ಡು, ಸ೦ಧ್ಯಾ ಪೂಜೆ ಹೊತ್ತಿಗೆ ತನ್ನಷ್ಟಕ್ಕೆ ತಾನೆ ಆಗುತ್ತದೆ, ಅದನ್ನ ಶ್ರೀಹರಿಗೆ ತೋರಿಸಿ, ಊಟಕ್ಕೆ ಹಾಕಿ ತಿನ್ನೀರಿ. ಇದೂ೦ದು ದೊಡ್ಡ ಯಜ್ಞ.  ಇದು ಪ್ರತಿಯೊಬ್ಬರಿಗೂ ಸಾಧ್ಯ. ಮನಸ್ಸು ಮಾಡುವುದೇ ಬಹುದೊಡ್ಡ ಸಾಧನೆ.
14. ಪ್ಯಾ೦ಟು, ಶರ್ಟು, ಬನೀನು ಹಾಕಿಕೊ೦ಡು ಊಟ ಮಾಡುವುದು, ಮೇಜಿನ ಮೇಲೆ ಊಟ, ನಿರ೦ತರ ನರಕಸದೃಶವಾದ ಸಾಧನೆ.
15. ನಮ್ಮ ಹಿರಿಯರು, ದಾಸರು, ಯತಿಗಳು ಕೊಟ್ಟಿರುವ ಕೊಡಿಗೆ ಬಗ್ಗೆ ಚಿ೦ತಿಸಿ, ಅವರ ಗ್ರ೦ಥ ಓದಿರಿ, ದೇವರನಾಮ, ಉಗಾಭೋಗ, ಸುಳ್ಹಾದಿ ಅಧ್ಯಯನ ಮಾಡಿರಿ, ತಿಳಿಯಿರಿ ಮತ್ತು ತಿಳಿಸಿರಿ. 
16. ತ್ರಿಕಾಲ ಸ೦ಧ್ಯಾ ಆಗದಿದ್ದವರು 3 ಕಾಲವಾದರು ಮಾಡಿ, 2 ಕಾಲ ಆಗದಿದ್ದರೂ ಒಪ್ಪತ್ತಾದರೂ ಮಾಡಿ, ಅದೂ ಆಗದಿದ್ದವರು, ಆ ಕಾಲದಲ್ಲಿ ಸ್ಮರಿಸಿ ಮಾನಸಿಕ 3 ಅರ್ಘ 10 ಗಾಯತ್ರೀ ಜಪ ಮಾಡಿರಿ. ಒಪ್ಪತ್ತು ಮಾಡುವವರು 2 ಕಾಲಕ್ಕೆ ಬನ್ನಿರಿ. ಎರಡು ಕಾಲ ಸ೦ಧ್ಯಾ ಮಾಡುತ್ತಿರುವವರು ಮೂರು ಕಾಲ ಮಾಡಿರಿ. ಇದು ಸದಾ ಶ್ರೀ ಕೃಷ್ಣಾ ಬ್ಯಾ೦ಕನಲ್ಲಿ ಕಾಣದ ಹಣ ಸ೦ಗ್ರಹವಾಗುತ್ತಿರುತ್ತದೆ. ಒಪ್ಪತ್ತು ಮಾಡುವವರೂ ಕೊನೆ ಪಕ್ಷ 12 ಅರ್ಘೆ ಬಿಟ್ಟು 32 * 3 = 96 ಗಾಯತ್ರೀ ಜಪವನ್ನಾದರೂ ಮಾಡಿ ಉತ್ತಮ ಸಾಧನೆ.
17. ಪ್ರತಿನಿತ್ಯ ತಪ್ಪದೇ ಶ್ರೀರಾಘವೇ೦ದ್ರಗುರುಸಾರ್ವಭೌಮರು ರಚಿಸಿರುವ ಪ್ರಾತಃಸ೦ಕಲ್ಪಗದ್ಯ ಬೆಳಿಗ್ಗೆ ಹಾಗೂ ಸ೦ಜೆ ಸರ್ವಸಮರ್ಪಣ ಗದ್ಯವನ್ನು ಹೇಳುವುದನ್ನು ರೊಢಿ ಮಾಡಿಕೊಳ್ಳಿ, ಇದರಿ೦ದ ಪ್ರತಿ ನಿತ್ಯ ನೀವು ಮಾಡುವ ಕರ್ಮಗಳೆಲ್ಲವನ್ನು ಶ್ರೀ ಹರಿ-ವಾಯು-ಗುರುಗಳಿಗೆ ಸಮರ್ಪಿಸಿದ೦ತಾಗುತ್ತದೆ. 
18. ದಿನನಿತ್ಯ ಸಮಯಾವಕಾಶ ಸಿಕ್ಕಾಗಲೆಲ್ಲಾ, ಶ್ರೀ ವೇ೦ಕಟೇಶ ಸ್ತೋತ್ರ, ಕುಲದೇವತಾ ಸ್ತೋತ್ರಗಳು, ಅನೇಕ ಶ್ರೇಷ್ಠ ಯತಿಗಳಿ೦ದ ರಚಿತವಾದ ಶ್ರೀ ಹರಿಯ ಸ್ತುತಿಗಳು, ತಾರತ್ಯಮೋಕ್ತವಾಗಿ ದೇವಾತಾ ಸ್ತುತಿಗಳು, ಶ್ರೀ ವಾಯುಸ್ತುತಿ...ಇತ್ಯಾದಿ ಶ್ರೀ ಹರಿ-ವಾಯು-ಗುರುಗಳ ಸ್ತೋತ್ರಗಳನ್ನು ಪಠಿಸುವುದು ಅತ್ತ್ಯುತ್ತಮ ಸಾಧನೆ.
19. ಸ್ನಾನ ಮಾಡುವಾಗ ನೀರೂ ಜಡ, ನಾವು ಜಡ. ಆದ್ದರಿ೦ದ ಜಡಾಭಿಮಾನಿ ಸ೦ಕರುಷರೂಪಿ ಶ್ರೀಹರಿಯ ಸ್ಮರಿಸು. ಅವನಿಗೆ ಸ್ನಾನಮಾಡಿಸುತ್ತಿದ್ದೇನೆ ಎನ್ನಿ, ಫಲ ಜಾಸ್ತಿ.
20. ದೇವರ ದೀಪ ಹಚ್ಚುವಾಗ, ಅದರಲ್ಲಿ ಭಗವ೦ತನ 13 ರೂಪ ಇದೆ (ಹಣತೆ-ಬತ್ತಿ-ಎಣ್ಣೆ-ದೀಪದಕಡ್ಡಿ) ಎನ್ನಿರಿ, ಇದೊ೦ದು ಸಾಧನೆ.
21. ಶ್ರೀತುಳಸಿಯನ್ನು ಏರಿಸುವಾಗ ಅದರಲ್ಲಿ 5317 ಭಗವ೦ತನ ರೂಪ ಇದೆ ಎ೦ದು ತಿಳಿಯಿರಿ.
22. ಹೂವನ್ನು ಏರಿಸುವಾಗ ಅದರಲ್ಲಿ ಭಗವ೦ತನ 161 ರೂಪ ಇದೆ ಎ೦ದು ತಿಳಿಯಿರಿ. ಒಳೆಯ ಹೂ ಏರಿಸಿದರೆ ಒಳ್ಳೆಯ ಫಲ, ಕೆಟ್ಟ ಹೂ ಏರಿಸಿದರೆ ಅದಕ್ಕೆ ತಕ್ಕ ಫಲ. 
ಏರಿಸಬೇಕಾದ ಹೂಗಳು : ಮಲ್ಲಿಗೆ, ಜಾಜಿ, ಸೇವ೦ತಿಗೆ, ಇರುವ೦ತಿಗೆ, ಸುಗ೦ಧರಾಜ, ಕಣಗೆಲೆ, ಸ೦ಪಿಗೆ, ದವನ, ಗುಲಾಬಿ, ಪಾರಿಜಾತ, ನ೦ದಿಬಟ್ಲು, ಕ್ಯಾದಿಗೆ...ಇತ್ಯಾದಿ.  
ಏರಿಸಬಾರದ ಹೂಗಳು : ಚೆ೦ಡು-ಕಾಕಡ, ತು೦ಬೆ ಹೂ, ಕನಕಾ೦ಬರ, ಎಕ್ಕದ ಹೂ, ಸ್ಪಟಿಕ ಏರಿಸಿದರೆ ನರಕ.
23. ನೈವೇದ್ಯ ಅ೦ದರೆ, ಪ್ರತಿಮಾ ಸಾಲಿಗ್ರಾಮದಲ್ಲಿರುವ ನೈವೇದ್ಯದ ಪದಾರ್ಥಗಳಲ್ಲಿರುವ ಹಾಗೂ ನೈವೇದ್ಯ ಮಾಡುವವರಲ್ಲಿ ಅ೦ತರ್ಯಾಮಿಯಾಗಿರುವ ಬಿ೦ಬನೇ ಶ್ರೀಹರಿ ಎ೦ದು ಐಕ್ಯ ಚಿ೦ತನೆಯೇ ನೈವೇದ್ಯ, ಅರಿಯುವುದು ಉತ್ತಮ ಸಾಧನೆ.
ಸಾಲಿಗ್ರಾಮದಲ್ಲಿ 5335 ರೂಪದಿ೦ದ ಇದ್ದಾನೆ
ಪ್ರತಿಮಾದಲ್ಲಿ 517 ರೂಪದಿ೦ದ ಇದ್ದಾನೆ.
ನೀರಿನಲ್ಲಿ 24 ರೂಪದಿ೦ದ ಇದ್ದಾನೆ.
ಶ್ರೀಗ೦ಧದಲ್ಲಿ 403 ರೂಪದಿ೦ದ ಇದ್ದಾನೆ.
ಉಪಕರಣದಲ್ಲಿ 52115 ರೂಪದಿ೦ದ ಇದ್ದಾನೆ
24. ನಾನು, ನಮ್ಮದು ಎ೦ಬ ಮ೦ತ್ರ ಬಿಟ್ಟು, ನೀನು ನಿನ್ನದು ಎ೦ಬ  ಮ೦ತ್ರ ಉತ್ತಮ ಸಾಧನೆ.
25. ಜೀವರಿಗೆ ಕಷ್ಟ, ಸುಖ, ದು:ಖ, ನೋವು, ನಲಿವು ಇತ್ಯಾದಿ ಹೇಗೆ ಬರುತ್ತದೆ, ಬ೦ದಿದೆ ? ಅ೦ದರೆ ಜೀವರ ಯೋಗ್ಯತೆ, ಜೀವರ ಗುಣ, ಜೀವರು ಮಾಡಿರುವ ಕರ್ಮ ಇದರಿ೦ದ ಸಾಧನೆ ಮಾಡಿಸಿರುತ್ತಾನೆ ಎ೦ದು ತಿಳಿಯುವುದೇ ಸಾಧನೆ

ಸಾಮ ವೇದಾಖ್ಯ ಉಪವೇದಃ : ಗಂಧರ್ವ ವೇದ

ಸಾಮ ವೇದಾಖ್ಯ ಉಪವೇದಃ : ಗಂಧರ್ವ ವೇದ : 
ಶೃಂಗೇರಿ ಜಗದ್ಗುರು ಪರಮ ಹಂಸ, ಪರಿವ್ರಾಜಕಾಚಾರ್ಯವರ್ಯ,ಕರ್ಣಾಟ ಸಿಂಹಾಸನಾಧೀಶ್ವರ , ಸಾಮವೇದೋದ್ಧಾರಕ,ಕರ್ಣಾಟಸಂಗೀತಸಾರ ರಸೋದ್ಧಾರಕ
ಶ್ರೀ ಶ್ರೀ ವಿದ್ಯಾರಣ್ಯಮಹಾಸ್ವಾಮಿನಾಂ ಶೀ ಚರಣಾರವಿಂದಾರ್ಪಣಮಸ್ತು.
ಸಂಗೀತಪರಂಪರೆಯಲ್ಲಿ ಶ್ರೀವಿದ್ಯಾರಣ್ಯರ ಕೊಡುಗೆ ಅಪಾರವಾದದು ಎಂಬುವದು ಯಾರಿಗೂ ತಿಳಿಯದ ವಿಷಯವು. ಅವರ ಕಾಲಕ್ಕೆ ಅರ್ಥಾತ್ ಸುಮಾರು ಹದಿನಾಲ್ಕನೆಯ ಶತಮಾದದಲ್ಲಿ ಸಾಮಗಾನ ಮತ್ತು ಸಂಗೀತವು ಅತ್ಯಂತ ವೈಲಕ್ಷಣ್ಯವಾಗಿದ್ದುಕೊಂಡಿತ್ತು. ಚತುರ ಕಲ್ಲಿನಾಥನು  ಶಾರ್ಙ್ಗದೇವನ ಸಂಗೀತರತ್ನಾಕರಕ್ಕೆ ವ್ಯಾಖ್ಯಾನರೂಪವಾದ "ಕಲಾನಿಧಿ" ಎಂಬ ಗ್ರಂಥದಲ್ಲಿ   "ಲಕ್ಷ್ಯಲಕ್ಷಣಯೋರ್ಬಹುಧಾ ವಿರೋಧಃ ||" ಶಾಸ್ತ್ರದಲ್ಲಿ ಹೇಳಿರುವಂಥ ಲಕ್ಷಣ ಮತ್ತು ಪ್ರಯೋಗದಲ್ಲಿರುವ ಲಕ್ಷ್ಯ ಇವೆರಡರ ನಡುವೇ ವ್ಯತಿರಿಕ್ತವಾದ ಲಕ್ಶ್ಯ ಭೇದ ಎಂಬ ಸಂದರ್ಭವನ್ನು ವಿವರಿಸುವಾಗ ;
" ಸಂಗೀತ ಸಾರಂ ಸಮವೀಕ್ಷ್ಯವಿದ್ಯಾರಣ್ಯಾಭಿತಶ್ರೀಚರಣಪ್ರಣೀತಮ್ || ಸುಗಾನತಾಯಧ್ವನಿಮಭ್ಯುಪೇತಾಹ್ಯಾದ್ಧಾರಣ ಶ್ರೀಚರಣೈರ್ನಿರುಕ್ತಾ ||" 
ಭಾವಾರ್ಥ: 
ಶಾಸ್ತ್ರವಿಹಿತವಾದ ಹಾಡುಗಾರಿಕೆಯನ್ನು (ಗ್ರಾಮೇಗೇಯಗಾನ) ಶಾಸ್ತ್ರಕ್ಕೆ ವಿರುದ್ಧವಾಗಿ,ಅರ್ಥಾತ್ ಸಾಮವೇದವನ್ನು ನಿಸ್ಸಾರತೆಯಿಂದ  ಹೇಳುತ್ತಿರುವಂಥಾ  ಮತ್ತು ಸಂಗೀತವನ್ನು ತಾಳಮೇಳಗಳಿಲ್ಲದೇ ಶಾಸ್ತ್ರವಿರುದ್ಧವಾಗಿ ಹೇಳುವಂಥಾ  ಒಂದು  ಆಪತ್ಭರಿತ ಸಂದರ್ಭವನ್ನು  ಶ್ರೀವಿದ್ಯಾರಣ್ಯರು ಅತಿ ಸಾಹಸದಿಂದ ತಮ್ಮ ಗ್ರಂಥವಾದ "ಸಂಗೀತ ಸಾರ"(ಇಂದಿಗೆ ಉಪಲಬ್ಧವಿಲ್ಲ) ಎಂಬ ಗ್ರಂಥದ ಮೂಲಕ ಸರಿಪಡಿಸಿದ್ದಾರೆ ಎಂಬುದಾಗಿ ಕೊಂಡಾಡಿದ್ದಾನೆ.  ಮತ್ತೂ ಹಲವರು ಅರ್ಥಾತ್ ಜಗದೇಕ ಮಲ್ಲ,ಗೋವಿಂದ ದೀಕ್ಷಿತ,ರಾಮಾಮಾತ್ಯ ,ತುಳಜಾಜಿ ಮಹಾರಾಜರು ಮುಂತಾದ ಸಂಗೀತ ದಿಗ್ಗಜರು ತಮ್ಮ ಗ್ರಂಥದಲ್ಲಿ ಶ್ರೀವಿದ್ಯಾರಣ್ಯರ ಕೊಡುಗೆಯನ್ನು ಹೆಸರಿಸಿದ್ದರೆ. ಆದರೇ ದುರದೃಷ್ಟವಶಾತ್ ಇಂಥ ಒಂದು ಅಮುಲ್ಯ ಗ್ರಂಥವು ನಮಗೆ ಉಪಲಬ್ಧವಿಲ್ಲದೇ ಇರುವದು ವಿಷಾದನೀಯ.
ಶಾಸ್ತ್ರೀಯ ಸಂಗಿತದ ಉಗಮ: 
ಶಾಸ್ತ್ರವಿಹಿತಂ ಶಾಸ್ತ್ರವಿವಕ್ಷಿತಾ ಸರ್ವ ರಾಗೇಷು ಏಕ ರೂಪತಾ | 
ಶಾಸ್ತ್ರವು ಹೇಳುವದೇನೆಂದರೇ ಎಲ್ಲಾ ರಾಗಗಳೂ ಅಯಾ ದೇಶಕಾಲಗಳಲ್ಲಿ (ಗ್ರಾಮೇಗೇಯಗಾನ) ನಿಯೋಜಿಸಲ್ಪಟ್ಟಿದ್ದರೂ ಅವುಗಳಲ್ಲಿ ಒಂದು ಏಕತಾನ ಇದ್ದೇ ಇರುತ್ತದೆ ಮಾತ್ತು ಅವು ಶಾಸ್ತ್ರವಿಹಿತವಾಗಿಯೇ ಇರುತ್ತದೆ. 
ಸಾಮವೇದಾದಿದಂ ಗೀತಂ ಸಂಜಗ್ರಾಹ ಪಿತಾಮಹಃ | ಗೀತೇನ ಪ್ರೀಯತೇ ದೇವಃ ಸರ್ವಜ್ಞಃ ಪಾರ್ವತೀಪತಿಃ || ೦೧ ||
ಸಾಮವೇದದಿಂದ ಹೊರಹೊಮ್ಮಿದ  ಗಂಧರ್ವ ವೇದ ಅಥವಾ ಸಂಗೀತ ಎಂಬ ಹೆಸರಿನ  ಈ ಉಪವೇದವು ಸಾಕ್ಷಾತ್ ಪರಬ್ರಹ್ಮನಿಂದಲೇ ಹುಟ್ಟಿತು. ದೇವದೇವನಾದ ಸರ್ವಜ್ಞನಾದ ಪಾರ್ವತೀಪತಿಯು ಸಂಗೀತಕ್ಕಲ್ಲದೇ ಮತ್ಯಾವ ಸೇವೆಯಿಂದ ಸಂಪ್ರೀತನಾಗುತ್ತಾನೆ.
ಗಾಂಧರ್ವಸ್ವರ ಸಂದರ್ಭೋ ಗೀತಮಿತ್ಯಾಭಿಧೀಯತೇ | ಗಾಂಧರ್ವಂ ಗಾನಮಿತ್ಯಸ್ಯ ಭೇದದ್ವಯಮುದೀರಿತಮ್|| ೦೨||
ಗಾಂಧರ್ವ ಸ್ವರ , ಈ ಸಂದರ್ಭದಲ್ಲಿ ಸ್ವರ ಎಂದರೇ ಸಂಗೀತವೆಂದೇ ಅರ್ಥ. ಈ ಸಂಗೀತವು ಎರಡು ವಿಧವಾದದ್ದು ಮೊದಲನೆಯದು ಗಾಂಧರ್ವಗೀತೆ ಎರಡೆನೆಯದು ಸಂಗೀತ.
ಅನಾದಿಸಂಪ್ರದಾಯಂ ಯದ್ಗಂಧರ್ವೈಃ ಸಂಪ್ರಯುಜ್ಯತೇ || ನಿಯತಂ ಶ್ರೇಯಸೋ ಹೇತುಃ ತದ್ಗಂಧರ್ವ ಪ್ರಚಕ್ಷತೇ ||೦೩||
ಅನಾದಿಕಾಲದಿಂದಲೂ ಸಂಪ್ರದಾಯದಿಂದ ಬಂದಂಥ ಅರ್ಥಾತ್ ಅಪೌರುಷೇಯವಾದ ಈ ಗಾಂಧರ್ವಗೀತೆಯು ನಿಃಶ್ರೇಯಸವಾದದು ಅರ್ಥಾತ್ ಮೋಕ್ಷಕ್ಕೆ ಪ್ರಧಾನವು.  
ಯತ್ತು ವಾಗ್ಗೇಯಕಾರೇಣ ರಚಿತಂ ಲಕ್ಷಣಾನ್ವಿತಮ್ | ದೇಶೀರಾಗಾದಿಭಿಃ ಪ್ರೋಕ್ತಂ ತದ್ಗಾನಂ ಜನರಂಜನಮ್ ||
ಈ ಅಪೌರುಷೇಯವಾದ ಗಾಂಧರ್ವಗೀತೆಯನ್ನೇ ಆಧಾರವಾಗಿಟ್ಟುಕೊಂಡು ಪಂಡಿತರು ಆಯಾದೇಶೀಭಾಷೆಗಳಲ್ಲಿ ರಚಿಸಿ ಹಾಡುವಂಥದ್ದು ,ಮನರಂಜನೆಯನ್ನು ಕೊಡುವಂಥದ್ದು ಸಂಗೀತವೆನಿಸಿಕೊಳ್ಳೊತ್ತದೆ.
ಇವೆರಡೂ ಹೇಗೆ ಭಿನ್ನವಾಗಿರುತ್ತದೆ ?
ಯತ್ರ ಲಕ್ಷ್ಮಪರಿತ್ಯಾಗೇ ಪ್ರತ್ಯವಾಯೋ ನ ವಿದ್ಯತೇ | ತಸ್ಮಾಲ್ಲಕ್ಷ್ಯಪ್ರಧಾನಂ ತನ್ನತು ಲಕ್ಷ್ಮಪ್ರಧಾನಮ್ |
ಗಾಂಧರ್ವಗೀತೆಯಲ್ಲಿ ಒಂದುಪಕ್ಷ ಶಾಸ್ತ್ರವಿಹಿತವಾದ ಲಕ್ಷಣಗಳನ್ನು ಬಿಟ್ಟರೂ ಪ್ರಯೋಗವೇ ಪ್ರಧಾನವಾಗಿರುವದರಿಂದ ಹಾಡುಗಾರಿಕೆಯಲ್ಲಿ ಯಾವ ದೋಷವೂ ಉಂಟಾಗುವದಿಲ್ಲ.
ಉದಹರಣೆಗೆ ಧ್ರುವಪದಗಳು , ಭಕ್ತಿಭಾವಗೀತೆಗಳು
ಪರಿತ್ಯಾಗೇನ್ನ ಲಕ್ಷ್ಯಸ್ಯ ರಂಜನಂ ನೈವ ಜಾಯತೇ |   ತಸ್ಮಾಲ್ಲಕ್ಷ್ಯಾನುರೋಧೇನ ಗಾನಂ ಲೋಕೇ ಪ್ರವರ್ತತೇ ||  
ಇನ್ನು ಶಾಸ್ತ್ರೀಯಸಂಗೀತದಲ್ಲಾದರೋ ಶಾಸ್ತ್ರದಲ್ಲಿ ಹೇಳಿರುವಂಥ ಲಕ್ಷಣಗಳನ್ನು ಬಿಟ್ಟುಹಾಡುವದರಿಂದ  ಹಾಡುಗಾರಿಕೆಯು ಸೊಗಸುವದೇ ಇಲ್ಲ.ಆದ್ದರಿಂದಲೇ ಶಾಸ್ತ್ರೀಯಸಂಗೀತವು ಶಾಸ್ತ್ರವು ವಿಧಿಸಿದ ಲಕ್ಷಣಗಳನ್ನು ಅನುಸರಿಸಿಯೇ ಪ್ರವರ್ತಿಸುತ್ತದೆ.
ಉದಾಹರಣೆ: ಕರ್ಣಾಟ ಸಂಗೀತ ,ಹಿಂದೂಸ್ಥಾನೀ ಸಂಗೀತ.ಹಾಗಾಗಿ ಸಂಗೀತದಲ್ಲಿ ತಾಳಮೇಳಗಳು ಇಲ್ಲದಿದ್ದರೇ ಸೊಗಸುವದೇ ಇಲ್ಲ.
ಗೀತಂ ವಾದ್ಯಂ ತಥಾ ನೃತ್ತಂ(ನೃತ್ಯಂ) ತ್ರಯಂ ಸಂಗೀತಮುಚ್ಯತೇ || ನೃತ್ಯಂ ವಾದ್ಯಾನುಗಂ ಪ್ರೋಕ್ತಂ ವಾದ್ಯಂ ಗೀತಾನುವೃತ್ತಿ ಚ ||
ಗಾನ , ವಾದ್ಯಗಳು ಮತ್ತು ನೃತ್ಯ ಇವುಮೂರೂ ಕೂಡಿದರೇ ಸಂಗೀತವೆನಿಸಿಕೊಳ್ಳುತ್ತದೆ. ನ್ಯುತವು ತಾಳಕ್ಕನುಗುಣವಾಗಿರುತ್ತದೆ.ತಾಳವು ಹಾಡುವಿಕೆಯನ್ನು ಅನುಸರಿಸುತ್ತದೆ

*ರಾಜಕೀಯದಲ್ಲಿ ಯುವಕರ ಪಾತ್ರ*

*ರಾಜಕೀಯದಲ್ಲಿ ಯುವಕರ ಪಾತ್ರ*
*ಅತ್ತ ಆಗಸದಲ್ಲಿ ಬೆಂಕಿಯುಂಡೆಯಾಗಿ ರವಿ ತಪಿಸುತ್ತಿದ್ದರೆ, ಇತ್ತ ಅವನಿಗೆ ಪೈಪೋಟಿಯೋ ಎಂಬಂತೆ ದೇಶಕ್ಕೆ ದೇಶವನ್ನೇ ಚುನಾವಣೆಯೆಂಬ ಮಹಾಗ್ನಿ ವ್ಯಾಪಿಸಿ ದಹಿಸುತ್ತಿದೆ. ಅಂತೂ ವಸಂತಕ್ಕೂ ಮೊದಲೇ ವೈಶಾಖ ಬಂದಿದೆಯೋ ಎಂಬಂತೆ ಭಾಸವಾಗುತ್ತಿರುವುದಂತೂ ಸುಳ್ಳಲ್ಲ.*
*ಎಲ್ಲ ಚರ್ಚೆಗಳೂ ರಾಜಕೀಯವೆಂಬ ಸಂಗತಿಯಲ್ಲೇ ಕೂಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ರಾಜಕಾರಣವೆಂಬ ಕ್ಷೇತ್ರ ಪ್ರಜ್ಞಾವಂತರಿಂದ ದೂರವೇ ಇರಲು ಕಾರಣವಾದರೂ ಏನು ಎಂಬ ಪ್ರಶ್ನೆ ಪ್ರಸ್ತುತ. ವೈದ್ಯ, ಎಂಜಿನಿಯರಿಂಗ್ ಮೊದಲಾದ ಬಹುಬೇಡಿಕೆಯುಳ್ಳ ವೃತ್ತಿಗಳಂತೆ ಯಾಕೆ ರಾಜಕಾರಣವೂ ಯುವಮಾನಸವನ್ನು ಸೆಳೆಯುವ ಕೆಲಸ ಮಾಡುತ್ತಿಲ್ಲ ಎಂಬುದು ರಾಜಕೀಯರಂಗದ ಭವಿಷ್ಯದ ದೃಷ್ಟಿಯಲ್ಲಿ ಬಹಳ ಮುಖ್ಯವಾದ ಪ್ರಶ್ನೆ. ಈ ಪ್ರಶ್ನೆಯನ್ನಿಟ್ಟುಕೊಂಡು ಹೊರಟರೆ ನಿಮಗೆ ಹಲವಾರು ರೀತಿಯ ಉತ್ತರಗಳು ಸಿಗುತ್ತವೆ.*
*ರಾಜಕೀಯ ಕ್ಷೇತ್ರದಿಂದ ಜನಸಾಮಾನ್ಯರು ಅದರಲ್ಲೂ ಯುವಕರು ಅಂತರ ಕಾಪಾಡಿಕೊಳ್ಳುವಂಥ ಸಂದರ್ಭ ಸೃಷ್ಟಿಯಾಗಲು ಮೊದಲ ಕಾರಣ ಅದು ಉಳಿದ ಕ್ಷೇತ್ರಗಳಂತೆ ಆಕರ್ಷಕವಾಗಿಲ್ಲ ಎಂಬುದು. ಅದು ಯಾವತ್ತೂ ಒತ್ತಡಗಳ ಮೊತ್ತ. ಸೋಲು ಗೆಲುವಿನ ಆಟ. ಗೆದ್ದವ ಸೋತ, ಸೋತವ ಸತ್ತ ಎಂಬ ಮಾತು ಈ ಕ್ಷೇತ್ರಕ್ಕೆ ಅಕ್ಷರಶಃ ಅನ್ವಯಿಸುತ್ತದೆ. ಆ ಮಾತೇ ಇನ್ನಷ್ಟು ನಮ್ಮನ್ನು ಭಯ ಮತ್ತು ಆತಂಕಕ್ಕೆ ನೂಕುತ್ತದೆ. ಮತ್ತೊಬ್ಬರ ಸೋಲಿನ ಸಮಾಧಿಯ ಮೇಲೆ ಇಲ್ಲಿ ಕಟ್ಟಿಕೊಳ್ಳುವ ಸೌಧ ಹೆಚ್ಚು ದಿನ ಅರಮನೆಯಾಗುಳಿಯದೇ ಬಹು ಬೇಗ ಭೂತ ಬಂಗಲೆಯಾಗಿ ಕಾಡಲಾರಂಭಿಸುತ್ತದೆ. ರಾಜಕೀಯವೆಂಬುದು ಒಂದು ಅನಿಶ್ಚಿತತೆಯ ಗೂಡು. ಜಪಾನಿನ ನೆಲದಂತೆ ಎಲ್ಲಿ ಯಾವಾಗ ಭೂಕಂಪವಾಗುತ್ತದೆಂದು ಹೇಳಲು ಬಾರದು.*
*ಅಷ್ಟಕ್ಕೂ ರಾಜಕೀಯ ಕ್ಷೇತ್ರಕ್ಕೆ ತನ್ನದೇ ಆದ ಅರ್ಹತೆಗಳ ನಿರ್ಬಂಧವೇ ಇಲ್ಲ. ಇಲ್ಲಿ ಯಾರು ಬೇಕಾದರೂ ನುಗ್ಗಬಹುದು ಅಥವಾ ಧುಮುಕಬಹುದು. ರಾಜಕೀಯಕ್ಕೆ ಇಳಿಯುವುದೆಂದರೆ ಅದು ನಿಜಕ್ಕೂ ಇರುವ ಗೌರವವನ್ನು ಕಡಿಮೆಗೊಳಿಸಿಕೊಂಡಂತಲೇ ಲೆಕ್ಕ ಎಂಬ ಭಾವ ಇಂದು ಜನರಲ್ಲಿ ಮನೆ ಮಾಡಿದೆ. ಹೀಗಿರುವಾಗ ಎಲ್ಲ ಒಳ್ಳೆಯತನಗಳನ್ನೂ ಜೊತೆಗಿಟ್ಟು ಹೋರಾಡುತ್ತೀರೆಂದು ಹೊರಡುವಿರಾದರೆ ಯುದ್ಧಕ್ಕೆ ಮೊದಲೇ ನೀವು ಸೋಲನ್ನು ಒಪ್ಪಿಕೊಂಡಂತೆ. ಲಾಗಾಯ್ತಿನಿಂದಲೂ ರಾಜಕೀಯ ಕ್ಷೇತ್ರ ನಡೆದು ಬಂದ ದಾರಿಯೇ ಅಂಥಾದ್ದು. ಇಲ್ಲಿ ಲೋಭಿಗಳಿಗೇ ಜಾಗ. ಮಹಾಭಾರತವನ್ನೇ ತೆಗೆದುಕೊಂಡರೆ ಅಲ್ಲಿ ದುರ್ಯೋಧನನಂಥ ಅಧಿಕಾರ ವ್ಯಾಮೋಹಿ ಮಾಡಿದ ಅನ್ಯಾಯಗಳ್ಯಾವುದೂ ಇಂದಿನ ರಾಜಕಾರಣಿಗಳಿಗೆ ಹೊಸದಲ್ಲ. ಧೃತರಾಷ್ಟ್ರರಂಥ ಪುತ್ರವ್ಯಾಮೋಹಿ ತಂದೆಯಂದಿರು, ಶಕುನಿಯಂಥ ವಿವೇಕವನ್ನೇ ಮರೆಸುವ ಆಪ್ತ ಸಮೂಹ, ಸ್ವತಃ ವೀರರಾಗಿದ್ದರೂ ಋಣಕ್ಕೆ ಬಿದ್ದು ಅನ್ಯಾಯವನ್ನು ಬೆಂಬಲಿಸುವ ಕರ್ಣರಂಥವರು ಇಲ್ಲಿಯೂ ಬೇಕಾದಷ್ಟಿದ್ದಾರೆ. ವ್ಯವಸ್ಥೆಯನ್ನು ಬದಲಿಸುವ ಹೊಸ ಹುಮ್ಮಸ್ಸಿನ ಯುವಕರೇನಾದರೂ ರಾಜಕೀಯ ಪ್ರವೇಶಿಸಿದರೆ ಕೆಲವೇ ದಿನಗಳಲ್ಲಿ ಇದ್ದ ಎಲ್ಲ ಕನಸುಗಳೂ ಮುರುಟಿಹೋಗುವಂಥ ಅಸಹಾಯಕ ಸ್ಥಿತಿ ಅವರಿಗೆ ಎದುರಾಗುತ್ತವೆ. ಗುಂಪುಗಾರಿಕೆ, ಜಾತೀಯತೆ, ಹಣಬಲ ಮುಂತಾದ ಅರ್ಹತೆಗಳಲ್ಲದ ಅರ್ಹತೆಗಳಿರುವವರು ಮಾತ್ರ ಇಲ್ಲಿ ಆಳಬಲ್ಲರು. ಚುನಾವಣೆಯೆಂಬುದು ಇಂದು ಕೊಡುಕೊಳ್ಳುವ ವ್ಯಾಪಾರವಾಗಿದೆ. ಪಕ್ಷಗಳೂ ಕೂಡ ಕೋಟಿಗಟ್ಟಲೆ ಸುರಿಯಬಲ್ಲ ಅಭ್ಯರ್ಥಿಗಳನ್ನೇ ಹುಡುಕುತ್ತವೆ.*
*ಅಷ್ಟರ ಮೇಲೂ ಯಾವುದೋ ಒಬ್ಬ ಉತ್ಸಾಹೀ ತರುಣ ರಾಜಕೀಯ ಪ್ರವೇಶಿಸುತ್ತಾನೆಂದೇ ಭಾವಿಸೋಣ. ರಾಜಕೀಯರಂಗ ಪ್ರವೇಶದ ನಂತರ ಅವನ ದೈನಿಕ ಕಾರ್ಯಗಳೇನಿರಬಹುದೆಂದು ಊಹಿಸುವುದು ಕಷ್ಟವಲ್ಲ. ಇಂದಿನ ರಾಜಕಾರಣಿಗಳು ಮಾಡುತ್ತಿರುವುದನ್ನೇ ಆತನೂ ಅನುಸರಿಸಬೇಕಾಗುತ್ತದೆ. ಎದುರಾ ಎದುರೇ ಸುಳ್ಳು ಹೇಳುವ ಗಟ್ಟಿತನ ಬೆಳೆಸಿಕೊಳ್ಳದಿದ್ದವನು ಇಲ್ಲಿ ಯಶಸ್ವಿಯಾಗಲಾರ. ಈ ಸುಳ್ಳಿನ ಕಂತೆ ಪ್ರಾರಂಭವಾಗುವುದು ಭರವಸೆಯೆಂಬ ವರಸೆಯಿಂದ. ತನ್ನ ವಿರುದ್ಧ ಪಕ್ಷದಲ್ಲೇ ಭುಗಿಲೇಳುವ ಅಸಮಾಧಾನವನ್ನು ಹತ್ತಿಕ್ಕಬೇಕು. ಒಂದೊಂದು ಮಾತಿನ ಮೇಲೂ ನಿಗಾ ಇಡಬೇಕು. ಆಡಿದ ಮಾತು ವಿವಾದಕ್ಕೀಡಾಯಿತೆಂದರೆ ನಾನು ಹಾಗೆ ಹೇಳಿಯೇ ಇಲ್ಲ ಎಂದು ವಾದಿಸಬೇಕು. ಜನ ಸೇವೆಯೇ ಜನಾರ್ದನ ಸೇವೆ, ತನ್ನ ಅವತಾರವಾಗಿದ್ದೇ ಸಮಾಜೋದ್ಧಾರಕ್ಕಾಗಿ ಎಂಬಂತೆ ಪೋಸು ಕೊಟ್ಟು ಅಧಿಕಾರ ಗಿಟ್ಟಿಸಿಕೊಳ್ಳಬೇಕು.*
*ಜಾತಿಯನ್ನು ಹೋಗಲಾಡಿಸುತ್ತೇನೆ ಎನ್ನುತ್ತಾ ಜಾತಿ ಸಮಾವೇಶಗಳನ್ನು ನಡೆಸಬೇಕು. ನಾವು ಬಂದರೆ ಒಳಗೊಳಗೇ ಒಳ ಮೀಸಲಾತಿಯನ್ನು ಕೊಡುವುದಾಗಿಯೂ ಹೇಳುತ್ತಾ, ಬೇರೆ ಧರ್ಮದವರ ಸಮಾವೇಶಕ್ಕೆ ಹೋಗಿ ಅವರ ವೇಷ ಭೂಷಣಗಳನ್ನು ಧರಿಸಿ ಅನ್ಯ ಧರ್ಮದವರ ಮೇಲೆ ಎತ್ತಿಕಟ್ಟುತ್ತಾ ಅವರನ್ನು ಸೆಳೆಯಲು ನೋಡಬೇಕು.*
*ಬೇರೆ ಯಾವ ಕ್ಷೇತ್ರಕ್ಕಾದರೂ ಒಂದು ನಿಗದಿತ ಕೆಲಸದ ವೇಳೆ ಎಂಬುದಿರುತ್ತದೆ. ಆದರೆ ರಾಜಕೀಯಕ್ಕೆ ಮಾತ್ರ ಹೊತ್ತು ಗೊತ್ತು ಎಂಬುದೇ ಇಲ್ಲ. ಚುನಾವಣೆ ಬಂದರಂತೂ ದಿನಕ್ಕೊಂದು ಕಡೆ ವಾಸ, ಎಷ್ಟೆಷ್ಟೋ ಹೊತ್ತಿಗೆ ಊಟ. ಮನೆ- ಮಕ್ಕಳು ಸಂಸಾರವೆಲ್ಲ ಮತ್ತೆಲ್ಲೋ.  ದಿನವಿಡೀ ಸಂಚಾರ, ರಾತ್ರಿ ಲೆಕ್ಕಾಚಾರ. ಇಂಥ ಎಲ್ಲ ಒತ್ತಡಗಳ ನಡುವೆ ಸಮಾಜೋದ್ಧಾರದ ನಿಜ ಉದ್ದೇಶ ಮರೆತೇ ಹೋಗಿ ಅಸ್ತಿತ್ತ್ವದ ಹೋರಾಟವಾಗಿ ಮಾರ್ಪಾಡಾಗುವುದು ಆಶ್ಚರ್ಯವೇನಲ್ಲ. ಶಿಸ್ತೇ ಇಲ್ಲದ, ಒಂದು ಚೌಕಟ್ಟೇ ಇಲ್ಲದ ಇಂಥ ಜೀವನವನ್ನು ರಾಜಕಾರಣಿಗಳ ಮಕ್ಕಳು ಬಿಟ್ಟರೆ ಮತ್ತಿನ್ಯಾರು ತಾನೇ ಬಯಸಲು ಸಾಧ್ಯ? ಅಷ್ಟಕ್ಕೂ ರಾಜಕೀಯದಲ್ಲಿ ಅಸ್ತಿತ್ವ ಕಾಣಬೇಕೆಂದರೆ ಸಜ್ಜನಿಕೆ ಕೆಲಸಕ್ಕೆ ಬರುವುದಿಲ್ಲ. ಹೀಗಿರುವಾಗ ಯಾವ ಸಜ್ಜನ ತಾನೇ ರಾಜಕೀಯವನ್ನು ಪ್ರವೇಶಿಸಲು ಮನಸು ಮಾಡಿಯಾನು? ಸಜ್ಜನರ ಪ್ರವೇಶವಾಗದೇ ಕಲುಷಿತ ವ್ಯವಸ್ಥೆಯ ಮಲಾಪಕರ್ಷಣ ಕಾರ್ಯ ನಡೆಯುವುದಾದರೂ ಹೇಗೆ? ಹೀಗೆಲ್ಲ ಯೋಚಿಸುವಾಗ ಭವಿಷ್ಯದ ರಾಜಕೀಯ ಸ್ಥಿತಿಯನ್ನು ನೆನೆಸಿ ಆತಂಕವಾಗುತ್ತದೆ. ಮುಂದೇನು ಎಂಬ ಪ್ರಶ್ನೆ ಮನಸ್ಸನ್ನು ಕುಟುಕುವಾಗಲೇ ಅಲ್ಲೊಂದು ಇಲ್ಲೊಂದು ಭರವಸೆಯ ಮಿಂಚು ಮಿನುಗುತ್ತದೆ ಮತ್ತು ಮನಸನ್ನು ತಂಪುಗೊಳಿಸುತ್ತದೆ.*
*ರಾಜಕೀಯಕ್ಕೆ ಯುವಕರು ಸೇರಿ ಹೊಸ ನೀರು ಹರಿಯಬೇಕೆಂಬ ಆಶಯಕ್ಕೆ ಪೂರಕವಾಗಿ ಅಲ್ಲಲ್ಲಿ ಯುವಪಡೆಗಳು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಸುದ್ದಿಯನ್ನು ಇತ್ತೀಚೆಗೆ ಹೆಚ್ಚಾಗಿ ಕೇಳುತ್ತಿದ್ದೇವೆ. ಅದರಲ್ಲೂ ಈ ಸಲವಂತೂ ಯುವಕರ ಪಾತ್ರ ನಿರ್ಣಾಯಕ. ಹಿಂದೆಂದೂ ಇರದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮತದಾರರು ಮತಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಇದನ್ನು ಅರಿತೇ ಎಲ್ಲ ಪಕ್ಷಗಳೂ ಯುವಕರನ್ನು ಸೆಳೆಯುವ ಕಾರ್ಯತಂತ್ರ ರೂಪಿಸಿವೆ. ಇದು ಆಶಾದಾಯಕ ಬೆಳವಣಿಗೆ ಎಂತಲೇ ಹೇಳಬಹುದಾದರೂ ಸ್ವತಃ ಯುವಕರ ರಾಜಕೀಯ ಪ್ರವೇಶವಾಗದೇ ಇದು ಪರಿಪೂರ್ಣವಾಗುವುದಿಲ್ಲ. ಯುವಮತಗಳನ್ನು ಸೆಳೆಯುವ ಸಲುವಾಗಿಯೇ ಎಲ್ಲ ಪಕ್ಷಗಳಲ್ಲೂ ಯುವಕರಿಗೆ ಮಣೆ ಹಾಕಲಾಗುತ್ತಿದೆ. ದೇಶದ ಮುಂದಾಳತ್ವ ವಹಿಸುವ ನಾಯಕತ್ವದ ಸ್ಥಾನದಲ್ಲೂ ಕೂಡ ಯುವಕರನ್ನೇ ಬಿಂಬಿಸಲಾಗುತ್ತಿದೆ. ವೃದ್ಧರು ಮಾತ್ರ ಅನುಭವಿಗಳು ಮತ್ತು ಅವರು ಮಾತ್ರ ದೇಶವಾಳಲು ಸಮರ್ಥರೆಂಬ ನಂಬಿಕೆಗಳು ಬಿದ್ದು ಹೋಗಿ ಹಳೆ ಬೇರು, ಹೊಸ ಚಿಗುರು ಎಂಬ ಮಾತು ಕಾರ್ಯಾನ್ವಯಿಯಾಗುತ್ತಿದೆ.*
*ಈ ಸಲದ ಚುನಾವಣೆ ಹಿಂದಿನ ಎಲ್ಲ ಚುನಾವಣೆಗಳ ಸಾಂಪ್ರದಾಯಿಕ ನಡೆಗಳನ್ನು, ನಂಬಿಕೆಗಳನ್ನು ಬದಲಿಸಿ ತನ್ನದೇ ಆದ ಹೊಸ ದಾರಿಯನ್ನು ಕಂಡುಕೊಂಡು ಚರಿತ್ರೆಯ ಪುಟಗಳಲ್ಲಿ ದಾಖಲಾಗುವ ನಿಟ್ಟಿನ ಎಲ್ಲ ಪರಿಕರಗಳನ್ನೂ ಒಳಗೊಳ್ಳುತ್ತಾ ಸಾಗುತ್ತಿದೆ. ಈ ಸರ್ತಿ ರಾಜಕೀಯದ ಸ್ಥಿತ್ಯಂತರಗಳನ್ನು ನಿರ್ಣಯಿಸುವವರು ಯುವಕರೇ ಎಂಬುದು ದೇಶದ ಭವಿತವ್ಯದ ದೃಷ್ಟಿಯಿಂದ ನೆಮ್ಮದಿ ತರುವ ವಿಷಯ. ಹಿಂದಿನ ಚುನಾವಣೆಗಳಂತೆ ಇದು ಪಕ್ಷ-ಪಕ್ಷಗಳ ನಡುವೆ, ಬದಲಾಗದ ಸಿದ್ಧಾಂತಗಳ ನಡುವೆಯಷ್ಟೇ ನಡೆಯದೇ ವ್ಯಕ್ತಿ-ವ್ಯಕ್ತಿಗಳ ನಡುವೆ, ಪೊಳ್ಳು - ಗಟ್ಟಿಗಳ ನಡುವೆ, ಸತ್ಯ-ಸುಳ್ಳುಗಳ ನಡುವೆ, ಪ್ರಾಮಾಣಿಕತೆ-ಅಪ್ರಾಮಾಣಿಕತೆಗಳ ನಡುವಿನ ಯುದ್ಧವೆಂದೇ ಭಾವಿಸಲಾಗುತ್ತಿದೆ. ಇಲ್ಲೀಗ ಮೊದಲಿನಂತೆ ಕಣ್ಣುಮುಚ್ಚಿ ಏನು ಕೊಟ್ಟರೂ ಅಂಗೀಕರಿಸುವ ರೂಢಿ ಬಿಟ್ಟುಹೋಗಿ, ಸತ್ಯಾಸತ್ಯತೆಯನ್ನು ಸ್ವತಃ ವಿವೇಚಿಸಬಲ್ಲ ಮತದಾರರ ಸಂಖ್ಯೆ ಹೆಚ್ಚಿದೆ. ದೇಶದ ಜನತೆ ಯಾವುದೋ ಒಂದು ಮಹಾಸಂಕ್ರಮಣಕ್ಕೆ ತುಡಿಯುತ್ತಿದ್ದಾರೋ ಎಂದು ಅನಿಸುವಂತೆ, ಜಿಡ್ಡುಗಟ್ಟಿದ ವ್ಯವಸ್ಥೆಗೊಂದು ಚುರುಕು ಮೂಡಿಸುವ ಬದಲಾವಣೆಗೆ ಮನಸು ಮಾಡಿದ್ದಾರೋ ಎಂಬಂತೆ ಒಕ್ಕೊರಲ ಘೋಷವೊಂದು ಕಿವಿಯ ಪರದೆಯ ಮೇಲೆ ಬೀಳುತ್ತಿದೆ. ಎಲ್ಲ ಕಟ್ಟು ಕಟ್ಟಳೆಗಳನ್ನು ಮೀರಿ ಏಕತ್ವದ ಪರ ಉದ್ಘೋಷವೊಂದು ಮೊಳಗುತ್ತಿದೆ. ಬದಲಾವಣೆಯ ಆರಂಭಕ್ಕೆ ಶ್ರೀಕಾರ ಹಾಕುವ ಅದಮ್ಯ ಉತ್ಸಾಹ ಯುವ ಸಮೂಹಗಳಲ್ಲಿ, ಅವರ ಕಂಗಳಲ್ಲಿ ಸ್ಫುರಿಸುತ್ತಿದೆ. ದಿಟಕ್ಕೂ ಸ್ವಾತಂತ್ರ್ಯ ಸಂಗ್ರಾಮದ ನಂತರ ದೇಶದ ಯುವ ಜನತೆ ಮತ್ತೊಮ್ಮೆ ಈ ಪ್ರಮಾಣದಲ್ಲಿ ಒಟ್ಟಾಗುತ್ತಿರುವುದು ಇದೇ ಮೊದಲಾಗಿರಬಹುದು. ಅಂತೂ ಒಳಗೊಳಗೇ ವ್ಯಾಧಿಪೀಡಿತವಾಗಿ ಸೊರಗುತ್ತಿದ್ದ ದೇಶದ ನರನಾಡಿಗಳಲ್ಲಿ ಹೊಸತನದ ಉತ್ಸಾಹವನ್ನು ತುಂಬುವ, ರಾಷ್ಟ್ರದ ಆರೋಗ್ಯವನ್ನು ಕಾಪಾಡುವ ಹೊಸ ವೈದ್ಯನ ಹುಡುಕಾಟವೀಗ ನಿರ್ಣಾಯಕ ಹಂತ ತಲುಪಿದೆ.*
*ಮಹಾವಿಜಯವನ್ನಲ್ಲದಿದ್ದರೂ ಕಂಗೆಟ್ಟ ದೇಶದ ಜನತೆಯ ಭರವಸೆಯನ್ನು ಜೀವಂತವಾಗಿಡುವ ಜಯವನ್ನಾದರೂ ದೇಶಕ್ಕೆ ಜಯ ಸಂವತ್ಸರವೆಂಬ ಹೆಸರಿನ ಹೊಸವರ್ಷ ಕಟ್ಟಿಕೊಡಲಿ ಎಂಬುದೇ ಈ ಹೊತ್ತಿನ ಆಶಯ.*

ಮಹದಾಯಿ ಕಳಸಾ ನಂಡೂರಿ

*ಮಹದಾಯಿ ಕಳಸಾ ನಂಡೂರಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಕಾಂಗ್ರೆಸ್ ಪಕ್ಷದ ಸಾಧನೆ ಶೂನ್ಯವಾಗಿದೆ. ಸಮಸ್ಯೆಗೆ ಪರಿಹಾರ ನೀಡುವುದರ ಬದಲಾಗಿ ಸಮಸ್ಯೆಯನ್ನು ಕಗ್ಗಂಟ್ಟು ಮಾಡಿದ್ದೇ ಅವರ ಸಾಧನೆಯಾಗಿದೆ* .
1. ಮಹದಾಯಿ ಕಳಸಾ ಬಂಡೂರಿ ವಿಷಯವನ್ನು ಟ್ರಿಬುನಲ್‍ಗೆ ತೆಗೆದುಕೊಂಡು ಹೋಗಿ ಸಮಸ್ಯೆಯನ್ನು ಕಗ್ಗಂಟು ಮಾಡಿದೆ. ಅಂದಿನ ಗೋವಾ ಕಾಂಗ್ರೆಸ್ ಸರ್ಕಾರದ ಒತ್ತಡಕ್ಕೆ ಮಣಿದು ನ್ಯಾಯ ಮಂಡಳಿ ರಚನೆ ಮಾಡಿದ್ದು ಡಾ|| ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ.
2. ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರು ಗೋವಾ ಚುನಾವಣೆಯಲ್ಲಿ ಕರ್ನಾಟಕಕ್ಕೆ ಒಂದು ಹನಿ ಕೂಡಾ ನೀರನ್ನು ನಿಡಲು ಸಾಧ್ಯವಿಲ್ಲ ಎಂದು ಭಾಷಣ ಮಾಡಿದ್ದರು.
3. ಈಗಿನ ಗೋವಾದ ಕಾಂಗ್ರೆಸ್ ಅಧ್ಯಕ್ಷ ಶಾಂತರಾಮ್ ನಾಯ್ಕ್ ಅವರು ಕರ್ನಾಟಕಕ್ಕೆ ನೀರು ಹರಿಸಕೂಡದು ಎಂದು ಪತ್ರಿಕಾಗೋಷ್ಠಿ ಮಾಡಿದ್ದಾರೆ.
4. ಜನವರಿ 6ರಂದು ಗೋವಾ ರಾಜ್ಯವು ಕರ್ನಾಟಕಕ್ಕೆ ನೀರು ಬಿಡುವುದರ ಬಗ್ಗೆ ಹೋರಾಟಕ್ಕೆ ಕರೆ ನೀಡಿದ್ದಾರೆ.
5. ಕನಾಟಕದಲ್ಲಿ ಶ್ರೀ ಯಡಿಯೂರಪ್ಪನವರ ಸರ್ಕಾರ ಮಹದಾಯಿ ಕಳಸಾ ಬಂಡೂರಿ ಕಾಲುವೆ ನಿರ್ಮಾಣ ಮಾಡಿದ್ದಾರೆ. ಶ್ರೀ ಸಿದ್ದರಾಮಯ್ಯ ಸರ್ಕಾರ ಕಾಲುವೆಗಳಿಗೆ ಅಡ್ಡಗೋಡೆ ನಿರ್ಮಿಸಿದೆ.
6. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶ್ರೀ ಅಮಿತ್ ಶಾ, ಶ್ರೀ ಯಡಿಯೂರಪ್ಪ ಹಾಗೂ ಗೋವಾ ರಾಜ್ಯದ ಮುಖ್ಯಮಂತ್ರಿ ಶ್ರೀ ಮನೋಹರ್ ಪರಿಕ್ಕರ್ ಅವರು ದೆಹಲಿಯಲ್ಲಿ ಸಭೆ ಸೇರಿ ಕರ್ನಾಟಕಕ್ಕೆ ಕುಡಿಯುವ ನೀರು ಕೊಡುವುದರ ಬಗ್ಗೆ ಅಥವಾ ನೀರು ಹರಿಸುವುದರ ಬಗ್ಗೆ ಗೋವಾ ಸರ್ಕಾರ ಒಪ್ಪಿಗೆ ನೀಡಿದೆ. ಇದನ್ನು ಶ್ರೀ ಸಿದ್ದರಾಮಯ್ಯ ಸರ್ಕಾರ ಈ ಪಕ್ರಿಯೆಯನ್ನು ವಿರೋಧಿಸಿದ್ದಾರೆ.
7. 2002ರಲ್ಲಿ ಆಗಿನ ಗೋವಾ ರಾಜ್ಯದ ಕಾಂಗ್ರೆಸ್ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣೆರವರು ಆಗಿನ ಪ್ರಧಾನಮಂತ್ರಿ ಶ್ರೀ ವಾಜಪೇಯ ಅವರು ಕಳಸಾ ಬಂಡೂರಿಗೆ ನೀಡಿದ ಅನುಮತಿಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಒಯ್ದರು.
8. ಈ ವಿಚಾರದ ಬಗ್ಗೆ ಇಷ್ಟು ಬೇಗ ಮಾತುಕತೆ ಬಗೆಹರಿಯುವುದಿಲ್ಲ. ಟ್ರಿಬುನಲ್‍ನಲ್ಲಿಯೇ ವಿವಾದ ಬಗೆಹರಿಯಬೇಕು ಎನ್ನುವ ಕಾಂಗ್ರೆಸ್ ನಿಲುವೇ ಕರ್ನಾಟಕಕ್ಕೆ ಮಾರಕವಾಗಿ ಪರಿಣಮಿಸಿದೆ.
9. ದ್ವಿಮುಖ ನೀತಿ ಮತ್ತು ಈ ಮಹದಾಯಿ ವಿಷಯವನ್ನು ಕಾಂಗ್ರೆಸ್ ಪಕ್ಷವು ರಾಜಕಾರಣ ಮಾಡುತ್ತಿದ್ದಾರೆ.
10. ಬಿಜೆಪಿ ನಾಯಕರ ವಿರುದ್ಧ ಮತ್ತು ಬಿಜೆಪಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡ ಇದೆ ಎನ್ನುವುದು ಸಾಬೀತು ಕೂಡ ಆಗಿದೆ.

ಗಾಯತ್ರೀ ಅನುಷ್ಠಾನ ಪದ್ಧತಿ

ಗಾಯತ್ರೀ ಅನುಷ್ಠಾನ ಪದ್ಧತಿ
ಸಂಧ್ಯಾವಂದನೆಯಲ್ಲಿ ಮಾಡಲೇಬೇಕಾದ ಪ್ರಮುಖವಾದ ಭಾಗ ಗಾಯತ್ರೀ ಜಪ.
ಗಾಯತ್ರೀಯೆಂದೊಡನೆ ಕೆಲವರಿಗೆ ನೆನಪಾಗುವುದು ಪಂಚ ಮುಖವುಳ್ಳ ಸ್ತ್ರೀ ರೂಪ. ಆದರೆ ಹಾಗಲ್ಲ. ಗಾಯತ್ರೀಯೆಂದರೆ ಭಗವಂತನ ಒಂದು ರೂಪ. ನಾವು ಗಾಯತ್ರೀಯನ್ನು ಹೀಗೆ ಧ್ಯಾನಿಸಬೇಕು. ಸೂರ್ಯಮಂಡಲದಲ್ಲಿರುವ ಗಾಯತ್ರೀಮಂತ್ರಪ್ರತಿಪಾದ್ಯನಾದ ಶ್ರೀಮನ್ನಾರಾಯಣನನ್ನು "ಧ್ಯೇಯಃ ಸದಾ" ಎಂಬ ಮಂತ್ರದಿಂದ ಧ್ಯಾನಿಸಿ ಒಂದು ಸಾವಿರ ಅಥವಾ ನೂರು ಅಥವಾ ಕನಿಷ್ಠ ಹತ್ತು ಗಾಯತ್ರೀಯನ್ನು ಜಪಿಸಬೇಕು.
ಸೂರ್ಯೋದಯವಾಗುವ ತನಕ ನಿಂತೇ ಗಾಯತ್ರೀಮಂತ್ರವನ್ನು ಜಪಿಸಬೇಕು. ಅನಂತರ ಕುಳಿತುಕೊಳ್ಳಬಹುದು. ಪ್ರಾತಃ ಸಂಧ್ಯಾವಂದನೆಯನ್ನು ನಕ್ಷತ್ರಗಳಿರುವಾಗಲೂ, ಸಾಯಂ ಸಂಧ್ಯಾವಂದನೆಯನ್ನು ಸೂರ್ಯನಿರುವಾಗಲೇ ಮಾಡುವುದು ಶ್ರೇಷ್ಢ. ಸಾಯಂ ಸಂಧ್ಯೆಯನ್ನು ಕುಳಿತು ನಡೆಸಬೇಕು.
ಧ್ಯಾನ:
ಶ್ರೀಮನ್ನಾರಾಯಣನು ಸೂರ್ಯಮಂಡಲದಲ್ಲಿ ಪದ್ಮಾಸನಾಸೀನನಾಗಿದ್ದಾನೆ. ತೋಳಲ್ಲಿ ವಂಕಿ, ಕಿವಿಯಲ್ಲಿ ಮಕರ-ಕುಂಡಲ, ಶಿರಸ್ಸಿನಲ್ಲಿ ಕರೀಟ, ಕತ್ತಿನಲ್ಲಿ ಮುತ್ತಿನ ಹಾರಗಳನ್ನು ಧರಿಸಿದ್ದಾನೆ. ಬಂಗಾರದ ಮೈಬಣ್ಣ, ಎರಡು ಕೈಗಳಿಂದ ಶಂಖ-ಚಕ್ರಗಳನ್ನು ಧರಿಸಿದ್ದಾನೆ. ಇಂತಹ ನಾರಾಯಣನನ್ನು ಮನದಲ್ಲಿ ಧ್ಯಾನಿಸಬೇಕು. ಇಂತಹ ಗಾಯತ್ರೀಯನ್ನು ದ್ವಿಜನಾದವನು ಮೂರು ಕಾಲದಲ್ಲಿ ಅವಶ್ಯ ಕರ್ತವ್ಯ:
"...ಸಂಧ್ಯಾತ್ರಯಂ ತು ಕರ್ತವ್ಯಂ ದ್ವಿಜೇನಾತ್ಮವಿದಾ ಸದಾ..."
ಸಂಧ್ಯಾವಂದನೆ, ಜಪ, ಪಾರಾಯಣ ಇವುಗಳನ್ನು ಆಸನದಲ್ಲಿ ಕುಳಿತು ಮಾಡುವುದು ಪ್ರಶಸ್ತ. ಹೇಗೆ ಆಸನದಲ್ಲಿ ವೈವಿಧ್ಯತೆಯಿರುತ್ತದೆಯೋ ಹಾಗೆಂಯೇ ಫಲದಲ್ಲಿಯೂ ಕೂಡ ವೈವಿಧ್ಯತೆ ಇದೆ. ಧರ್ಮ-ಶಾಸ್ತ್ರದಲ್ಲಿ ಹೇಳುವಂತೆ ಆಸನದ ನಿಯಮಗಳು:
ಶ್ಲೋಕ:
ವಂಶಾಸನೆ ದರಿದ್ರಸ್ಯಾತ್ ಪಾಷಾಣೆ ವ್ಯಾಧಿಸಂಭವಃ |
ಧರಣ್ಯಾಂ ದುಃಖಮಾಪ್ನೋತಿ ದೌಭರ್ಾಗ್ಯಂ ದಾರುಕಾಸನೆ ||
ತೃಣಾಸನೆ ಯಶೋಹೀನಃ ಪಲ್ಲವೇ ಚಿತ್ತವಿಭ್ರಮಃ |
ಕುಶಾಸನೆ ಸರ್ವಸಿಧ್ಧಿಃ ಕಂಭಲೆ ದುಃಖಮೆವ ಚ ||
ಕೃಷ್ಣಾಜಿನೆ ಙ್ಞಾನಸಿಧ್ಧಿಃ ಮೋಕ್ಷಸ್ಯಾತ್ ವ್ಯಾಘ್ರಚರ್ಮಣಿ ||
ಬಿದಿರಿನ ಆಸನದಲ್ಲಿ ಕುಳಿತು ಸಂಧ್ಯಾವಂದನೆ ಜಪಾದಿಗಳನ್ನು ಮಾಡಿದರೆ ದರಿದ್ರವು ಉಂಟಾಗುತ್ತದೆ. ಕಲ್ಲಿನ ಆಸನ ವ್ಯಾಧಿಗೆ ಕಾರಣ. ಕೇವಲ ನೆಲದಲ್ಲಿ ಕುಳಿತು ಮಾಡಿದರೆ ದುಃಖವನ್ನು ಹೊಂದುತ್ತಾನೆ. ಮಣೆಯ ಆಸನ, ಅಂದರೆ ಹಸೆಮಣೆ ಮೇಲೆ ಕುಳಿತು ಮಾಡಿದರೆ ದೌರ್ಭಾಗ್ಯವನ್ನು [ ಮಣೆಯ ಮೇಲೆ ಕುಳಿತು ಮಾಡುವುದಾದರೆ ಒಂದು ನಾಣ್ಯವನ್ನು ಮಣೆಯ ಮೇಲೆ ಹೊಡೆಸಿರಬೇಕು ], ಇನ್ನು ಹುಲ್ಲಿನ ಆಸನ ಯಶಸ್ಸು ಹಾನಿ. ಹಾಗೆಯೇ ಎಲೆ, ಪಲ್ಲವಾದಿಗಳ ಮೇಲೆ ಕುಳಿತು ಮಾಡುವುದರಿಂದ ಬುದ್ಧಿ-ಭ್ರಮಣೆ.
ಹಾಗಾದರೆ ಶ್ರೇಷ್ಠ ಆಸನಗಳೆಂದರೆ: ದರ್ಭಾಸನ ಸರ್ವಸಿದ್ಧಿಪ್ರದಾಯಕವಾಗಿದೆ. ಹಾಗೆಯೆ ಕೃಷ್ಣಾಜಿನ ಆಸನ ಙ್ಞಾನಕ್ಕೆ ಹೇತುವಾಗಿದೆ. ಇನ್ನು ವ್ಯಾಘ್ರಾಸನ ಮೋಕ್ಷವನ್ನು ಕರುಣಿಸುವುದು.
ಗಾಯತ್ರೀ ಜಪವನ್ನು ಕೂಡ ಮನೆಯಲ್ಲಿ ಮಾಡುವುದಕ್ಕಿಂತ ಗೋಶಾಲೆಯಲ್ಲಿ ಮಾಡುವುದರಿಂದ ಹೆಚ್ಚು ಫಲ. ನದಿ-ತೀರ್ಥಗಳ ಸನ್ನಿಧಿಯಲ್ಲಿ ಮಾಡುವುದರಿಂದ ಸಾವಿರಾರುಪಾಲು ಪುಣ್ಯ. ಶಾಲಗ್ರಾಮದ ಎದುರು ಮಾಡುವುದರಿಂದ ಅನಂತ ಫಲ.
ಈ ಸಂಧ್ಯಾವಂದನೆಯನ್ನು ಮೂರುದಿನ ಯಾವನು ಮಾಡುವುದಿಲ್ಲವೋ ಅವನು ಶೂದ್ರ. ಹಾಗಾಗಿ ಪುನಃ ಉಪನಯನ ಮಾಡಬೇಕು. ಆದ್ದರಿಂದ ಎಲ್ಲರೂ ಕೂಡ ಸಂಧ್ಯಾವಂದನೆಯನ್ನು ನಿತ್ಯದಲ್ಲಿಯೂ ತಪ್ಪದೇ ಮಾಡಬೇಕು.

ವೈಕುಂಠ ಏಕಾದಶಿ

ಏಕಾದಶ ವೈಕುಂಠ ಏಕಾದಶಿಯ ದಿನ ವೈಕುಂಠದ (ಸ್ವರ್ಗದ ಅಥವಾ ವಿಷ್ಣುಲೋಕದ) ಬಾಗಿಲು ತೆರೆದಿರುತ್ತದೆ ಎಂದು ನಮ್ಮ ಹಿಂದೂ ಧರ್ಮದಲ್ಲಿ ಪ್ರತೀತಿ ಇದೆ.
ಏಕಾದಶ ಈ ಸಂಸ್ಕೃತ ಪದದ ಅರ್ಥ ಹನ್ನೊಂದು(11).ಹಿಂದೂ ಪಂಚಾಂಗದ 12 ಮಾಸಗಳ ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದಹನ್ನೊಂದನೆಯ ದಿನವನ್ನು ಏಕಾದಶಿಎನ್ನಲಾಗುತ್ತದೆ.
ಒಂದು ಮಾಸದಲ್ಲಿ ಎರಡು ಏಕಾದಶಿಗಳಿರುತ್ತವೆ.ಈ ದಿನದಂದು ಯಾವ ಆಹಾರವನ್ನೂ ಸೇವಿಸದೆ, ಉಪವಾಸ ಮಾಡುವ ಸಂಪ್ರದಾಯವಿದೆ.ಈ ದಿನದಂದು ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ,ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ,ನಿರಾಹಾರ ವ್ರತವನ್ನು ಆಚರಿಸುತ್ತಾರೆ.
ಏಕಾದಶಿಯ ದಿನ ಉಪವಾಸವಿದ್ದು,ಮಾರನೆಯ ದಿನ ಅಂದರೆ ದ್ವಾದಶಿಯಂದು ಬೆಳಿಗ್ಗೆ 9 ಘಂಟೆಯೊಳಗಾಗಿಪಾರಣೆ(ಊಟ)ಮಾಡುವ ಸಂಪ್ರದಾಯವಿದೆ. ಕೆಲವರು ಏಕಾದಶಿಯಂದು ಮೌನ ವ್ರತ ಸಹ ಆಚರಿಸುತ್ತಾರೆ.
ವೈಕುಂಠ ಏಕಾದಶಿ
ಏಕಾದಶಿಗಳಲ್ಲಿ ವಿಶೇಷ ದಿನ. ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯೇ ಈ ವಿಶೇಷ ದಿನ. ಈ ದಿನ ರಂಗನಾಥ/ವೆಂಕಟೇಶ್ವರ/ಶ್ರೀನಿವಾಸ/ವಿಷ್ಣು ದೇವಸ್ಥಾನಗಳಲ್ಲಿ, ಈ ದಿನ ದೇವಸ್ಥಾನಗಳಲ್ಲಿ ನಿರ್ಮಿಸಿರುವ ವೈಕುಂಠದ್ವಾರದ ಒಳಗೆ ಹೋಗಿ ಬಂದರೆ ಮೋಕ್ಷ ಸಿಗುವುದೆಂಬ ಹಿಂದೂ ಧರ್ಮದಲ್ಲಿ ಪ್ರತೀತಿಯಿದೆ..
ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯ ಹೆಸರು "ಶಯನೀ" (ಅಥವಾ ಪ್ರಥಮಾ ಎಂದೂ ಇನ್ನೊಂದು ಹೆಸರಿದೆ). ಅದಿನ ಮಹಾವಿಷ್ಣುವು ನಿದ್ರಿಸಲು ತೆರಳುವನೆಂದೂ, ಮುಂದೆ ಕಾರ್ತೀಕ ಮಾಸದ ಶುಕ್ಲ ಪಕ್ಷದ ಏಕಾದಶಿ "ಪ್ರಬೋಧಿನೀ"ಯ ನಂತರ ಬರುವ’ಉತ್ಥಾನ’ದ್ವಾದಶಿಯಂದು. ಅವನು ನಿದ್ರೆ ಮುಗಿಸಿ ಎಚ್ಚರಗೊಳ್ಳುತಾನೆಂದು ಆಸ್ತಿಕರ ನಂಬಿಕೆ. ಈ ಎರಡೂ ಏಕಾದಶಿಗಳ. ನಡುವಿನ ನಾಲ್ಕು ತಿಂಗಳ ಅವಧಿಯನ್ನು .ಚಾತುರ್ಮಾಸ್ಯ ಎನ್ನಲಾಗುತ್ತ  29/12/2017 ಶುಕ್ರವಾರ, ಏಕಾದಶಿ- ವಿಶೇಷ
ಹುಣ್ಣಿಮೆ ಮತ್ತು ಅಮಾವಾಸ್ಯೆಯಾದ ನಂತರ ಬರುವ ಹನ್ನೋಂದನೇಯ ದಿನ.
ಈ ದಿನವು ಶ್ರೀ ಹರಿಗೆ ಬಹಳ ಪ್ರಿಯ. ಮೂರು ಲೋಕಗಳಲ್ಲಿ ಏಕಾದಶಿ ವ್ರತಕ್ಕಿಂತ ಮಿಗಿಲಾದ ವ್ರತವು ಮತ್ತೋಂದು ಇಲ್ಲ. ಈ ವ್ರತವನ್ನು ಪಾಲಿಸುವುದರಲ್ಲಿ ದೋಷ ಗಳಿದ್ದರೂ ಸಹ ,ಇದು ನಮಗೆ ಪರಮಧಾಮವಾದ ವೈಕುಂಠಕ್ಕೆ ದಾರಿಯನ್ನು ನೀಡುತ್ತದೆ.
ಏಕಾದಶಿಯ ಮತ್ತೋಂದು ಹೆಸರು ಹರಿವಾಸ. ಏಕಾದಶಿ ವ್ರತ ಮುಖ್ಯ ಉದ್ದೇಶವು, ಶ್ರೀ ಹರಿಯನ್ನು ನಮ್ಮ ಎಲ್ಲಾ ಇಂದ್ರಿಯಗಳಿಂದ ತೃಪ್ತಿಪಡಿಸುವುದೇ ಆಗಿದೆ. "ಉಪವಾಸ" ಎಂದರೆ ಸಮೀಪದಲ್ಲಿ ನಿವಾಸಿಸುವುದು ಎಂದು ಅರ್ಥ. ಹರಿ ಭಕ್ತ ವಿಲಾಸದಲ್ಲಿ ಹೀಗೆ ಹೇಳಲಾಗಿದೆ.
ಏಕಾದಶಿ ಯನ್ನು ನಾವು ಎಲ್ಲಾ ಪಾಪಕಾರ್ಯಗಳಿಂದ ದೂರವಿದ್ದು,ಇಂದ್ರಿಯ ತೃಪ್ತಿಯ ಕೆಲಸಗಳನ್ನು ತ್ಯಜಿಸಿ, ಭಗವಂತನ ಸಮೀಪದಲ್ಲಿ ಇರಬೇಕು. ಏಕಾದಶಿಯ ದಿನದಂದು ಉಪವಾಸ ವನ್ನು ಆಚರಿಸುವವನು ತನ್ನ ಎಲ್ಲಾ ಪಾಪಕರ್ಮಗಳ ಫಲವನ್ನು  ಕಳೆದುಕೊಂಡವನಾಗಿ ,ಭಕ್ತಿಸೇವೆಯಲ್ಲಿ ಮುಂದುವರೆಯುತ್ತಾನೆ ಎಂದು ಬ್ರಹ್ಮವೈವರ್ತ ಪುರಾಣವು ತಿಳಿಸುತ್ತದೆ. ಉಪವಾಸ ಮಾಡುವ ಮುಖ್ಯ ಉದ್ದೇಶವು,ದೈಹಿಕ ಅವಶ್ಯಕತೆಯನ್ನು ಕಡಿಮೆ ಮಾಡಿಕೊಂಡು,ನಮ್ಮ ಹೆಚ್ಚಿನ ಸಮಯವನ್ನು  ಶ್ರೀ ಕೃಷ್ಣನ ಸೇವೆಯಲ್ಲಿ ತೊಡಗಿಸುವುದೆ ಆಗಿದೆ.
ವೈಕುಂಠ ಏಕಾದಶಿಯು, ಮಾರ್ಗಶಿರ ಮಾಸದಲ್ಲಿ ಅಮಾವಾಸ್ಯದ  ನಂತರ ಬರುವ ಹನ್ನೋಂದನೇಯ ದಿನ. ಶ್ರೀ ವೈಕುಂಠ, ಅಲ್ಲಿ ಆ ಪರಮ ಪ್ರಭುವಿನ ಸಾಹಚರ್ಯ ದಲ್ಲಿ ಪರಿಪೂರ್ಣ ಆನಂದವನ್ನು ಮತ್ತು ಜ್ಞಾನವನ್ನು ಪಡೆದು ಸನಾತನವಾಗಿ ಅವನ ಸೇವೆಯಲ್ಲಿ ನಿರತರಾಗಿರುವುದೇ ನಮ್ಮ ಗುರಿಯೂ,ಆಸೆಯೂ ಆಗಿರಬೇಕು.ನಾವು ಈಗ ಈ ಪವಿತ್ರ ದಿನದ ಕಥೆಯನ್ನು ಕೇಳೊಣ.
ಒಮ್ಮೆ ಮಹಾಪ್ರಳಯದ ನಂತರ ಭಗವಂತನು ಚಿಕ್ಕ ಶಿಶುವಿನ ರೂಪದಲ್ಲಿ ಒಂದು ಆಲದ ಎಲೆಯ ಮೇಲೆ ಪ್ರಳಯ ಕಾಲದ  ಜಲದಲ್ಲಿ ತೇಲಾಡುತ್ತಿದ್ದನು. ಅವನು ಚತುರ್ಮುಖ ಬ್ರಹ್ಮ ನನ್ನು ಸೃಷ್ಠಿಸಿ,ಸೃಷ್ಠಿ ಕಾರ್ಯ ವನ್ನು ಪ್ರಾರಂಭಿಸಲು ಆದೇಶಿಸಿದನು. ಆದರೆ ಸ್ವಲ್ಪ ಸಮಯದಲ್ಲೇ ಬ್ರಹ್ಮ ದೇವನು ತನ್ನ ಶಕ್ತಿಗಳ ಮೂಲನಾದ ಭಗವಂತನನ್ನು ಮರೆತು,ಅಹಂಕಾರದಿಂದ ಸೃಷ್ಠಿಕಾರ್ಯವನ್ನು ಮಾಡಲಾರಂಭಿಸಿದನು. ಆ ಸಮಯದಲ್ಲಿ ಲೋಕ ಮತ್ತು ಕಂಠ ಎಂಬ ಇಬ್ಬರು ರಾಕ್ಷಸರು ಭಗವಂತ ನ ಕಿವಿಗಳಿಂದ ಉದ್ಭವಿಸಿದರು.  ಆ ರಾಕ್ಷಸರು ಅಹಂಕಾರ ಮತ್ತು ಅಪರಾದ ಭಾವಗಳಿಂದ ತುಂಬಿದ್ದ ಬ್ರಹ್ಮದೇವನನ್ನು ಸಂಹರಿಸಲು ಹೊರಟರು. ಆಗ ಬ್ರಹ್ಮದೇವನು ಕೂಡಲೇ ತನ್ನ ಅಪರಾದವನ್ನು ಅರಿತು ರಕ್ಷಣೆಗಾಗಿ ತನ್ನ ತಂದೆಯಾದ ಭಗವಾನ್ ವಿಷ್ಣು ವನ್ನು ಕುರಿತು ಪ್ರಾರ್ಥಿಸಿದನು. ಆಗ ಭಗವಂತನು ಬ್ರಹ್ಮನನ್ನು ಕ್ಷಮಿಸಿ, ಆ ಇಬ್ಬರು ರಾಷಸರಿಗೆ ವರಗಳನ್ನು ನಿಡಲು ಬಯಸಿದನು. ಆಗ ಬ್ರಹ್ಮದೇವನು, ಈ ರಾಕ್ಷಸರು, ಒಂದು ಮಾಸದವರೆಗೆ ನಿನ್ನೋಂದಿಗೆ ಯುದ್ದ ಮಾಡಿ,ಮರಣಾನಂತರ ನಿನ್ನ ಪವಿತ್ರವಾದ ಪಾದ ಪದ್ಮಗಳ ಆಶ್ರಯವನ್ನು ಪಡೆಯುವಂತೆ ವರವನ್ನು ಅನುಗ್ರಹಿಸು ಸ್ವಾಮಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದನು.
ಬ್ರಹ್ಮದೇವನು ಕೋರಿದಂತೆಯೇ ಭಗವಂತನು ಆಶೀರ್ವದಿಸಿದನು. ಭಗವಂತನು ಅವರಿಬ್ಬರನ್ನು ಶಂಕ ಮತ್ತು ಚಕ್ರಗಳಾಗಿ ಬದಲಾಯಿಸಿ ಶ್ರೀ ವೈಕಂಠ ದಲ್ಲಿ ತನ್ನ ಶಾಶ್ವತ ಸೇವಕರಾಗುವಂತೆ ಅವಕಾಶ ನೀಡಿದನು.
ಆ ಸಮಯದಲ್ಲಿ ಲೋಕ ಮತ್ತು ಕಂಠರಿಬ್ಬರೂ ಭಗವಂತನಿಗೆ ಈ ರೀತಿಯಲ್ಲಿ ಹೇಳಿದರು, ಓ ಶ್ರೀಮನ್ನಾರಯಣನೇ! ಸ್ವತಃ ನಿನ್ನ ಕೈಗಳಿಂದ ನಮ್ಮನ್ನು ಸಂಹರಿಸುವ ಮೂಲಕ ನಮಗೆ ಮುಕ್ತಿಯನ್ನು ನೀಡಿದ್ದೀಯೇ. ನಮಗೆ ಶ್ರೀ ವೈಕುಂಠದಲ್ಲಿ ನಿವಾಸವನ್ನು ನೀಡಿ,ನಿನ್ನ ಶಾಶ್ವತ ಸೇವೆಯನ್ನು ಮಾಡುವಂತಹ ಭಾಗ್ಯವನ್ನು ಕರುಣಿಸಿದ್ದೀಯೆ.
ಈ ಧನುರ್ಮಾಸದಲ್ಲಿ ಬರುವ ಶುಕ್ಲ ಪಕ್ಷ ದಿವಸದಂದು ಶ್ರೀ ವೈಕುಂಠ ಧಾಮದ ಉತ್ತರ ದ್ವಾರವನ್ನು ತೆರೆದಿಡುವ ಮೂಲಕ ನಮ್ಮನ್ನು ವೈಕುಂಠಕ್ಕೆ ಆಹ್ವಾನಿಸಿದ್ದೀಯೆ. ಆದರೆ ನೀನು ನಮಗೆ ಮತೋಂದು  ವರವನ್ನು ಅನುಗ್ರಹಿಸಬೇಕು. ಎಲ್ಲಾ ಪ್ರಜೆಗಳು ನಮ್ಮನ್ನು ಮತ್ತು ಈ ದಿನವನ್ನು ಶ್ರೀ ವೈಕುಂಠ ಏಕಾದಶಿಯೆಂದು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತಾರೆ.
ಭೂಲೋಕದಲ್ಲಿ ಯಾವ ಮನುಷ್ಯರು ವೈಕುಂಠ ಏಕಾದಶಿಯಂದು ಉತ್ತರ ದ್ವಾರದಿಂದ ಅತಿ ಪವಿತ್ರವಾದ ನಿನ್ನ ಆಲಯವನ್ನು ಪ್ರವೇಶಿಸುತ್ತಾರೋ, ಅವರಿಗೆ ಮರಣದ ನಂತರ ವೈಕುಂಠ ಪ್ರಾಪ್ತಿಯು ಲಭಿಸಲಿ ಮತ್ತು ವೈಕುಂಠದಲ್ಲಿ ಎಲ್ಲ ಶಾಶ್ವತ ಸೇವಕರಂತೆ, ಅವರಿಗೂ ನಿನ್ನ ಶಾಶ್ವತ ಸೇವೆ ದೊರಕಲಿ.
ಆಗ   ನಾರಾಯಣನು ಲೋಕ ಮತ್ತು ಕಂಠರು ಕೋರಿದ ವರವನ್ನು ಅನುಗ್ರಹಿಸಿದನು. ಆ ದಿನದಂದು ನಾರಾಯಣನು ಅತಿಪವಿತ್ರವಾದ ವೈಕುಂಠ ಏಕಾದಶಿಯಂದು ಉತ್ತರ ದ್ವಾರದಿಂದ ತನ್ನ ಆಲಯವನ್ನು  ಪ್ರವೇಶಿಸುವ ಮನುಷ್ಯರಿಗೆ, ಅವರ ಮರಣದ ನಂತರ ಮೋಷವನ್ನು ನೀಡಿ ವೈಕುಂಠ ಪ್ರಾಪ್ತಿಯನ್ನು ಪ್ರಸಾದಿಸುತ್ತಾರೆ. ಈ ರೀತಿಯಲ್ಲಿ ಏಕಾದಶಿಯು ಮೋಕ್ಷಕ್ಕೆ ಸಂಬಂಧಿಸಿರುವುದರಿಂದ, ಈ ಏಕಾದಶಿಯನ್ನು "ಮೋಕ್ಷೋತ್ಸವ" ಎಂದೂ ಕರೆಯಲಾಗಿದೆ

ಮಂತ್ರ ದೇವತೆ

ಮಂತ್ರ ದೇವತೆ :
ಮಂತ್ರ ದೇವತೆ ಎಂಬ ಶಕ್ತಿಯ ಕಥೆಯ ಸಾರಾಂಶ ಹೀಗಿದೆ. ಮಂತ್ರದೇವತೆ ಎಂಬ ಒಂದು ದೈವೀ ಶಕ್ತಿಯನ್ನು ಇಂದು ಈ ತುಳುನಾಡಿನ ನೂರರಲ್ಲಿ ಹತ್ತು ಮನೆಯವರು ನಂಬಿಕೊಂಡು ಆರಾಧಿಸುತ್ತಾ ಬರುತ್ತಿದ್ದಾರೆ. ಮಂತ್ರ ಮೂರುತಿ ಎಂದು ಕರೆಸಿಕೊಳ್ಳುವ ಈ ಶಕ್ತಿಯನ್ನು ಕೆಲವರು ಬೀರು ಕಲ್ಕುಡನ ಒಡ ಹುಟ್ಟಿದ ಸಹೋದರಿ ‘ಸತ್ಯಮ್ಮ’ನ ಇನ್ನೊಂದು ಅವತಾರ ಎಂದೇ ತಿಳಿದು ಆರಾಧಿಸಿಕೊಂಡು ಬಂದಿದ್ದರೂ ಈ ಮಂತ್ರ ದೇವತೆಗೆ ಸಂಬಂಧಿಸಿದ ಮೂಲ ಕಥೆ ಬೇರೆಯೇ ಇದೆ.
ಕೆಲವು ವರ್ಷಗಳ ಹಿಂದೆ ಕೇರಳ ರಾಜ್ಯದ ಕುಂಟಾಲ ತಂತ್ರಿ ಎಂಬ ಬ್ರಾಹ್ಮಣರೊಬ್ಬರು ಉಪ್ಪಿನಂಗಡಿ ಬಳಿಯ ತನ್ನ ಸಂಬಂದಿಕರೊಬ್ಬರ ಮನೆಗೆ ಬಂದಾಗ ಅಲ್ಲಿ ‘ವರ್ತೆ’ ಎಂಬ ಒಂದು ದೈವೀ ಶಕ್ತಿಗೆ ಪೂಜೆ ನಡೆಯುತ್ತಿರುತ್ತದೆ. ಬಳಿಕ ಆ ದೈವದ ಕಾರ್ಣಿಕದ ಕಥೆಯನ್ನು ಕೇಳಿಸಿಕೊಂಡ ತಂತ್ರಿಗಳು ತನ್ನ ಮನೆಯಲ್ಲಿಯೂ ಇಂಥದ್ದೇ ಒಂದು ದೈವ ಇರುತ್ತಿದ್ದರೆ ನನ್ನ ಸಂಸಾರ ನನ್ನ ಭೂಮಿಯನ್ನು ಕಳ್ಳಕಾಕರಿಂದ ರಕ್ಷಿಸಿ ನಮ್ಮನ್ನು ಕಾಪಾಡುವ ಶಕ್ತಿಯನ್ನು ನಾನೂ ಪೂಜಿಸುತ್ತಿದ್ದೆ ಎಂಬ ಆಶಯದೊಂದಿಗೆ ತನ್ನ ಊರಿಗೆ ಹೊರಟು ಹೋಗುತ್ತಾರೆ.
ಒಂದು ದಿನ ಕುಂಟಾಲ ತಂತ್ರಿಗಳು ತನ್ನ ಮನೆಯಲ್ಲಿ ಜಪ ಮಾಡುತ್ತಿದ್ದ ಸಂದರ್ಭದಲ್ಲಿ ಪಾರ್ವತಿ ದೇವಿಯ ಅನುಗ್ರಹದಿಂದ ಅವರ ಮಡಿಲಿಗೆ ಒಂದು ಸುಣ್ಣದ ಕಲ್ಲಿನ ರೂಪದ ವಸ್ತು ಒಂದು ಬೀಳುತ್ತದೆ.
ತಂತ್ರಿಗಳು ಈ ಅಪರೂಪದ ವಸ್ತುವನ್ನು ತೆಗೆದು ತನ್ನ ‘ಕಲ್ಲಕಲೆಂಬಿ’ ಎಂಬ ಕಪಾಟಿನಲ್ಲಿ ಇಟ್ಟು ಬಾಗಿಲು ಹಾಕುತ್ತಾರೆ. ದಿನಕಳೆದಂತೆ ಒಂದು ಸಂಜೆ ಆ ವಸ್ತು ಕಪಾಟಿನ ಒಳಗಿನಿಂದ ಕುಂಟಾಲ ತಂತ್ರಿಗಳೇ... ನಾನು ಬರೇ ಸುಣ್ಣದ ಕಲ್ಲಲ್ಲ. ನೀವು ಎಂದು ಅಂತರಂಗದಲ್ಲಿ ಬಯಸಿದಂತೆ ಪಾರ್ವತಿ ದೇವಿಯ ಅನುಗ್ರಹದಿಂದ ನಿಮಗೆ ಒದಗಿ ಬಂದ ದೈವಶಕ್ತಿ. ನಿಮ್ಮ ಮಂತ್ರ ಕಾಯಕದೊಂದಿಗೆ ನನ್ನನ್ನು ನೆನೆದು ಮುನ್ನಡೆಯಿರಿ. ತೂಗುಯ್ಯಾಲೆ ಕಟ್ಟಿಸಿ ನನ್ನನ್ನು ಅದರಲ್ಲಿ ಪ್ರತಿಷ್ಠಾಪಿಸಿ ನನಗೆ ಹಾಲು-ಹಣ್ಣು ನೀಡಿ ಭಯ ಭಕ್ತಿಯಿಂದ ಆರಾಧಿಸಿಕೊಂಡು ಬಂದರೆ ನಿಮ್ಮನ್ನು ಸಕಲ ಸಂಪತ್ತು ನೀಡಿ ರಕ್ಷಿಸಿಕೊಂಡು ಬರುತ್ತೇನೆ, ನಂಬಿಕೊಳ್ಳಿ ಎಂಬ ಅಪ್ಪಣೆಯಾಯಿತು. ಆ ಶಕ್ತಿಯ ಮಾತುಗಳನ್ನು ಕೇಳಿಸಿಕೊಂಡ ಕುಂಟಾಲ ತಂತ್ರಿಗಳು ಪುಳಕಗೊಂಡು ಸಂತೋಷದಿಂದ ಮೆರೆದರು. ಮರುದಿನವೇ ಆ ದೈವದ ಅಪ್ಪಣೆ ಪ್ರಕಾರ ವಿಧಿ-ವಿದಾನಗಳನ್ನು ನೆರವೇರಿಸಿದರು. ಮುಂದಿನ ದಿನಗಳಲ್ಲಿ ತನ್ನ ಮಂತ್ರದ ವೈದಿಕ ಕ್ರಿಯೆಗಳಲ್ಲಿ ಈ ದೈವೀಶಕ್ತಿಯನ್ನೇ ಮುಂದಿಟ್ಟುಕೊಂಡು ಆ ಶಕ್ತಿಗೆ ‘ಮಂತ್ರದೇವತೆ’ ಎಂಬ ಹೆಸರನ್ನಿಟ್ಟು ಭಯ-ಭಕ್ತಿಯಿಂದ ಪೂಜಿಸಿಕೊಂಡು ಬರುತ್ತಾರೆ. ಕೇರಳ ರಾಜ್ಯದಲ್ಲಿ ಮಂತ್ರ ದೇವತೆ ಎಂಬ ಶಕ್ತಿಯ ಕಾರಣಿಕ ಊರಿಂದ ಊರಿಗೆ ಹರಡುತ್ತಿರಬೇಕಾದರೆ ಇತ್ತ ಮೂಡಬಿದಿರೆ ಇರುವೈಲು ಎಂಬ ಊರಿನ ‘ತೂತ್ನಾಡ್ ಬರ್ಕೆ’ಯ ಕಾಂತು ಬೈದ್ಯರ ಕಿವಿಗೂ ಈ ದೈವದ ಕಾರಣಿಕದ ಕಥೆಗಳು ಕೇಳಲಾರಂಬಿಸುತ್ತದೆ.
ತೂತ್ನಾಡ್ ಬರ್ಕೆಯ ಕಾಂತು ಬೈದ್ಯರದ್ದು ದೊಡ್ಡ ಗುತ್ತಿನ ಮನೆ. ವಿಶಾಲವಾದ ಗದ್ದೆ, ತೋಟವಿರುವ ಭೂಮಿ. ಈ ಭೂಮಿಯಲ್ಲಿ ಯಾವುದೇ ಪಸಲು ಬಂದರೆ ಅದು ಕಳ್ಳ-ಕಾಕರ ಪಾಲಾಗುತ್ತಿತ್ತು. ಕಳ್ಳರ ಬಾಧೆ ವಿಪರೀತವಾಗಿ ಸಹಿಸಲಾಸಾಧ್ಯವಾದಾಗ ನೊಂದು ಬೆಂದು ಕಾಂತು ಬೈದ್ಯರು ಇದನ್ನು ತಡೆಯಲು ನನ್ನ ಮನೆಯಲ್ಲಿ ಒಂದು ದೈವವಾದರೂ ಇರುತ್ತಿದ್ದರೆ ಹೀಗೆ ಆಗುತ್ತಿತ್ತೇ...? ಎಂಬ ಚಿಂತೆಯಲ್ಲಿ ಮುಳುಗಿದ್ದಾಗ ತನ್ನ ಮನೆಗೆ ನೆಂಟರಾಗಿ ತನ್ನ ಬಾವ ಪದ್ದೊಂಜಿ ಬೈದ್ಯರು ಬರುತ್ತಾರೆ. ಕಾಂತು ಬೈದ್ಯರ ನೋವು ವೇದನೆಯನ್ನು ಕೇಳಿಸಿಕೊಂಡ ತನ್ನ ಬಾವ ಕೇರಳ ರಾಜ್ಯದಲ್ಲಿ ಕುಂಟಾಲ ತಂತ್ರಿಗಳ ಮನೆಯಲ್ಲಿ ಒಂದು ಕಾರಣಿಕದ ‘ಮಂತ್ರ ದೇವತೆ’ ದೈವ ಇದೆಯಂತೆ. ಆ ದೈವದ ಹೆಸರಿನಲ್ಲಿ ತೆಂಗು, ಕಂಗುಗಳಿಗೆ ‘ಕೊಡಿ’ ಕಟ್ಟಿದರೆ ಯಾವ ಕಳ್ಳ ಉಪಟಳವೂ ಇರುವುದಿಲ್ಲವಂತೆ ಎಂಬ ಆಶಾಭಾವನೆಯೊಂದಿಗೆ ಸೀದಾ ಕೇರಳ ರಾಜ್ಯದ ಕುಂಟಾಲ ತಂತ್ರಿಗಳನ್ನು ಬೇಟಿ ಮಾಡುತ್ತಾರೆ.ಕಾಂತು ಬೈದ್ಯರ ಜೊತೆಯಲ್ಲಿಯೇ ‘ಮಂತ್ರದೇವತೆ’ ಎಂಬ ಶಕ್ತಿ ಈ ತುಳುನಾಡಿಗೆ ಬರುತ್ತದೆ. ಕಳ್ಳತನ, ವಂಚನೆ ಮಾಡಿದರೂ ಈ ದೈವ ನೇರವಾಗಿ ಆ ಕಳ್ಳರ ಮನೆ ಸೇರಿ ತನ್ನ ಕಾರಣಿಕವನ್ನು ಇಂದಿಗೂ ತೋರಿಸಿಕೊಡುತ್ತದೆ.
ಇಂದು ಈ ತುಳುನಾಡಿನ ಎಲ್ಲೆಲ್ಲೂ ಆ ಶಕ್ತಿಯನ್ನು ಮನೆಯ ಒಳಗೇ ನಂಬಿಕೊಂಡು ಆರಾಧಿಸುವುದನ್ನು ನಾವು ಕಾಣುತ್ತೇವೆ. ಮಂತ್ರದೇವತೆ ಎಂದರೆ ಅದೊಂದು ಮಾಯಾ ಶಕ್ತಿ. ಆದರೆ ಇದಕ್ಕೆ ಕೋಲ ನಡೆಯಬೇಕಾದರೆ ಕಾಯದಲ್ಲಿ ನಲಿಕೆಯವರು ಕೋಲ ಕಟ್ಟಬೇಕು. ಮಂತ್ರ ದೇವತೆಯ ಕೋಲ ಕಟ್ಟುವುದರಲ್ಲಿ ಬಿಡುವಿಲ್ಲದ ಕಲಾವಿದ ಎಂದರೆ ಲೋಕಯ ನಲಿಕೆಯವರು. ಬಂಟ್ವಾಳ ತಾಲೂಕಿನಲ್ಲಿ ಸುಮಾರು ಜನರು ದೈವಗಳಿಗೆ ಕೋಲ ಕಟ್ಟುವವರು ಇರುತ್ತಾರೆ ನಿಜ. ಆದರೆ ಮಂತ್ರ ದೇವತೆಯ ಕೋಲ ಇದೆ ಎಂದಾದರೆ ಒಂದು ವರ್ಷದ ಮೊದಲೇ ಇವರಲ್ಲಿ ದಿನ ನಿಗದಿಪಡಿಸಿಕೊಳ್ಳಬೇಕು