ಮಂಗಳವಾರ, ಏಪ್ರಿಲ್ 17, 2018

ನಾನೇಕೆ ನನ್ನ ಧರ್ಮವನ್ನು ಪ್ರೀತಿಸುತ್ತೇನೆ ?

ನಾನೇಕೆ ನನ್ನ ಧರ್ಮವನ್ನು ಪ್ರೀತಿಸುತ್ತೇನೆ ?
ಪ್ರತಿಯೊಂದು ಧರ್ಮವೂ ಮನುಷ್ಯನಲ್ಲಿ ಒಂದು ಸಂಸ್ಕಾರವನ್ನು, ಒಂದು ಅರಿವನ್ನು ಮೂಡಿಸುತ್ತದೆ. ಆ ಸಂಸ್ಕಾರವಾದರೋ ನಮ್ಮ ನಿತ್ಯದ ಬದುಕಿಗೆ ದಾರಿದೀಪ. ಬೆಳಕಿನ ದಾರಿಗೆ ಸೂರ್ಯನಂತೆಯೇ ಬದುಕಿನ ದಾರಿಗೆ ಧರ್ಮ ಬೆಳಕಾಗುತ್ತದೆ. ನನ್ನದು ಸನಾತನ ಧರ್ಮ. ಜೀವ-ಜಡದಂಗಳದಲ್ಲಿರುವ ನಂಟನ್ನು ಹೊಸೆದು ಬೆಸೆದು ಸುಂದರ ತತ್ವವೊಂದನ್ನು ಕಟ್ಟಿಕೊಟ್ಟ ಧರ್ಮ. ವೇದವ್ಯಾಸರು, ಸನಕಾದಿ ಮುನಿಗಳು, ದೂರ್ವಾಸರು, ಅತ್ರಿ, ಅಗಸ್ತ್ಯರು, ವಸಿಷ್ಟ, ವಿಶ್ವಾಮಿತ್ರರು, ಜನಕ ಮಹಾರಾಜರು ಪ್ರೀತಿಸಿದ ಧರ್ಮವನ್ನು ರಮಣರು, ರಾಮಕೃಷ್ಣರು, ವಿವೇಕಾನಂದರು ಪೋಷಿಸಿದರು. ಇಲ್ಲಿನ ಬಗೆ ಆಚರಣೆ ಸರಳ ಸುಂದರ.
ದಿನ ನಿತ್ಯ ಮುಂಜಾವಿಗೆ ಕಣ್ತೆರೆದಾಗ ದೇವರ ದರ್ಶನವನ್ನು ಮಾಡಬೇಕು. 'ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ಮಂಚಾಲೆ ರಾಘಪ್ಪ' ಎನ್ನುವ ಮಾತಿದೆ. ದರ್ಶನಕ್ಕೆ ನಿತ್ಯ ತಿರುಪತಿಯನ್ನು ತಲುಪಲು ಕಷ್ಟ ಸಾಧ್ಯವಲ್ಲವೇ?
"ಕರಾಗ್ರೆ ವಸತೇ ಲಕ್ಷ್ಮಿ, ಕರಮಧ್ಯೇ ಸರಸ್ವತಿ|
ಕರಮೂಲೇ ತು ಗೋವಿಂದ ಪ್ರಭಾತೆ ಕರ ದರ್ಶನಂ||"
ಭಗವಂತ ಇಲ್ಲಿಯೇ ನನ್ನೊಟ್ಟಿಗೇ ಇದ್ದಾನೆ ಎನ್ನುವ ಧೈರ್ಯವನ್ನು ನಿತ್ಯ ಎದ್ದೇಳುವಾಗ ನನ್ನ ಧರ್ಮ ತುಂಬಿಕೊಡುತ್ತದೆ.
ಬ್ರಹ್ಮಾಂಡದಲ್ಲಿ ಜೀವ ಕೋಟಿ ಸಂಕುಲಗಳನ್ನು ಭಗವಂತ ಭೂಮಿಯಲ್ಲಿ ಸೃಷ್ಟಿಸಿದ. ಅದನ್ನು ಅವನೇ ಪಾಲಿಸುವ ಹೊಣೆಹೊತ್ತನು. ಭಗವಂತ ತಂದೆಯಾದ ಮೇಲೆ ಧರಿತ್ರಿ ನಮ್ಮ ತಾಯಿಯಲ್ಲವೇ? ಅರೆ! ಈ ಭೂಮಿಯನ್ನು ನಾವು ತುಳಿಯುತ್ತೇವೆ, ಅಗೆದು ಬಗೆಯುತ್ತೇವೆ. ವಿಧಿಯಿಲ್ಲವೇ. ಆದರೆ ಸ್ಪರ್ಶಿಸುವ ಮುನ್ನ ಒಮ್ಮೆ ಅವಳಲ್ಲಿ ಶರಣಾಗಬಹುದಲ್ಲವೇ?
"ಸಮುದ್ರವಸನೆ ದೇವಿ ಪರ್ವತ ಸ್ತನ ಮಂಡಲೆ,
ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ"
ಈ ಶ್ಲೋಕವನ್ನು ಹೇಳುವಾಗ ಅವಳಲ್ಲಿನ ವಾತ್ಸಲ್ಯ ನೂರ್ಮಡಿಯಾಗುತ್ತದೆ.
ಅಂತರಂಗ ಶುದ್ಧಿ ಮಾನವನ ಜೀವನದ ಪ್ರಮುಖ ಸಾಧನ. ಅಂತೆಯೇ ಬಹಿರಂಗ ಶುದ್ಧಿಯೂ ಕೂಡ. 'ಗಂಗಾಪಾನ ತುಂಗಾಪಾನ' ಎನ್ನುವ ಮಾತಿದೆ. ಹಾಗಾದರೆ ನಿತ್ಯ ಗಂಗೆಯನ್ನು ಹುಡುಕಿ ಮಿಂದು ಬರುವುದೇ?
"ಗಂಗೇಚ ಯಮುನೇಚ ಗೋದಾವರಿ ಸರಸ್ವತಿ,
ನರ್ಮದೇ ಸಿಂಧು ಕಾವೇರಿ ಜಲಸ್ಮಿನ್ ಸನ್ನಿಧಿಂ ಕುರು."
ಬಾತ್ ರೂಮಿನ ಶವರ್ ನ ಅಡಿಯಲ್ಲಿ ನಿಂತರೂ ಈ ಶ್ಲೋಕದಿಂದ ಸರ್ವರೋಗಗಳನ್ನು ಕಳೆಯುವ ಪಾಪವಿನಾಶಿನಿಯಾದ ಗಂಗಾ-ಕಾವೇರಿಯರ ಕರುಣೆಯನ್ನು ಬೇಡಬಹುದು.
ಒಂದಷ್ಟು ಹೊತ್ತು ದೇವರ ಸ್ಮರಣೆ ಕಣ್ಮುಚ್ಚಿ ತದೇಕಚಿತ್ತದಿಂದ "ಕೃಷ್ಣ, ರಾಮ" ಎಂದರೆ ಸಾಕಲ್ಲವೆ. "ಕರ್ಷತಿ ಇತಿ ಕೃಷ್ಣಃ", " ರಮಂತೇ ಇತಿ ರಾಮಃ"‌ ಭಗವಂತ ನಮ್ಮೊಳಗಿನ ನಕಾರಾತ್ಮಕ ತರಂಗಗಳನ್ನು ಕರ್ಷಿಸಿ ಅವನ ಕರುಣೆಯಿಂದ ಸಕಾರಾತ್ಮಕ ಶಕ್ತಿಯನ್ನು ತುಂಬುವುದಿಲ್ಲವೆ.
ಬಹಿರಂಗ ಶುದ್ಧಿಯಾಯಿತು ಅಂತರಂಗ ಶುದ್ಧಿ?
"ಅಪವಿತ್ರಃ ಪವಿತ್ರೋವ ಸರ್ವಾವಸ್ಥಂ ಗತೋಪಿವ
ಯಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಬ್ಯಂತರಂ ಶುಚಿಃ". 
ರಾತ್ರಿ ಮಲಗುತ್ತೇವೆ. ಕತ್ತಲಿನದ್ದು ತಮೋಗುಣ. ಇರುಳಿನಲ್ಲಿ ಸೂರ್ಯನಾರಾಯಣನ ಪ್ರಭೆ ಇರುವುದಿಲ್ಲ. ವಿಜ್ಞಾನದ ದೃಷ್ಟಿ ಹರಿಸಿ ಕಾಣುವುದಾದರೆ, ಸಕಲ ಜೀವರಾಶಿಗಳ ಆಧಾರಸ್ಥಾಯಿಯಾಗಿ ಸೂರ್ಯನಿದ್ದಾನೆ. ಅವನ ಕಿರಣಗಳು ಸೋಕದ ಹೊರತು ಪುಷ್ಪಗಳೂ ಅರಳಲೊಲ್ಲವು. ಸಸ್ಯಗಳು ಅವನ ಗೈರಿನಲ್ಲಿ ಇಂಗಾಲದ ಆಮ್ಲವನ್ನು ಹೊರಹಾಕುತ್ತವೆ. ಇನ್ನು ಅವನ ಬೆಳಕನ್ನು ಬಿಂಬಿಸುವ ಚಂದಿರ ತಿಂಗಳಿನಲ್ಲಿ ಕ್ಷೀಣಿಸುತ್ತಾ ಬರುತ್ತಾನೆ. ಇದರ ಪರಿಣಾಮ ಇಡ ಮತ್ತು ಪಿಂಗಳದ ಮೂಲಕ ನಮ್ಮ ದೇಹವನ್ನು ಹೊಕ್ಕು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿ ಮಲಗಿರುವಾಗ ನಮ್ಮಲ್ಲಿನ‌ ಜೀವಕೋಶಗಳಲ್ಲಿನ ಜೀವ ಕ್ರಿಯ ನಿಧಾನವಾಗಿರುತ್ತದೆ. ಆ ಕಾರಣ ಮನಸ್ಸಿನ ಮೇಲೆ ತಮೋಗುಣ ಪ್ರಭಾವಿತವಾಗಿ ದುಸ್ವಪ್ನಗಳು ಬರುವ ಸಧ್ಯತೆ ಹೆಚ್ಚು. ಅದಕ್ಕೆಂದೆ ಪ್ರತಿ ಮುಂಜಾವಿಗೆ ಯೋಗ ಸೂರ್ಯ ನಮಸ್ಕಾರಗಳಿಂದ ಭಗವಂತ ನೀಡಿದ ಮತ್ತೊಂದು‌ ದಿನಕ್ಕೆ ಅವನನ್ನು ವಂದಿಸುತ್ತಾ ಇರುಳಿನ ತಮೋಗುಣವನ್ನೆಲ್ಲಾ ಕಳೆದು ನಮ್ಮನ್ನು ಪವಿತ್ರಗೊಳಿಸು ಎಂದು ಬೇಡುತ್ತೇವೆ.
ಸೃಷ್ಟಿಸಿದವನಿಗೆ ಭೂಮಿ‌ ಭಾಮೆಯಾದರೆ ಅಂತೆಯೇ ತುಳಸಿಯೂ ಕೂಡ. ಭೂಮಿ ಸಕಲ ಜೀವಗಳಿಗೆ ಆಸರೆ ನೀಡಿದರೆ ತುಳಸಿ ಜೀವ ವಾಯುವನ್ನು ನೀಡುತ್ತಾಳೆ. ಹಾಗಾಗಿ ಈ ತುಳಸಿಗೆ ಭಗವಂತನೇ ಆಸರೆ. ನಿತ್ಯ ತುಳಿಸಿಗೆ ಒಂದು ನಮಸ್ಕಾರ.
" ನಮಃ ತುಳಸಿ ಕಲ್ಯಾಣಿ, ನಮೋ ವಿಷ್ಣುಪ್ರಿಯೆ ಶುಭೆ,
ನಮೋ ಮೋಕ್ಷ ಪ್ರದೇ ದೇವಿ ನಮಃ ಸಂಪತ್ಪ್ರದಾಯಿನಿ||".
ಭಗವಂತನನ್ನು ಸ್ಮರಿಸಲು ಕಾಲವೇ ಆದರೂ ಮುಂಜಾವಿಗೆ ಅವನನ್ನು ನೆನೆಯದಿದ್ದರೆ ನರಜನ್ಮದ ಭಾರವೆಲ್ಲಿ‌ ಹಿಂಗೀತು?
"ನಿತ್ಯಾಯ ನಿರವದ್ಯಾಯ ಸತ್ಯಾನಂದ ಚಿದಾತ್ಮನೆ,
ಸರ್ವಾಂತರಾತ್ಮನೆ ಶ್ರೀಮದ್ವೇಂಕಟೇಶಾಯ ಮಂಗಳಂ||"
ಎಂದು ಆರತಿ ಬೆಳಗುವಾಗ ನನ್ನಲ್ಲಿನ ಪ್ರಸ್ತುತ ದಿನ ಸರ್ವರಲ್ಲಿಯೂ ಭಗವಂತನನ್ನು ಕಾಣುವ ಮನಸ್ಸು ಪುಟಿದೇಳುತ್ತದೆ.
"ಮಾತೃದೇವೋಭವ, ಪಿತೃದೇವೋಭವ" ಎನ್ನುವ ಸದ್ಭಾವನೆಯನ್ನು ಎಳೆಯ‌‌ ಮನಸ್ಸಿನಿಂದ ಬಿತ್ತಿಬೆಳೆಸಿದ ಧರ್ಮ ನನ್ನದು.
ಗಂಡು-ಹೆಣ್ಣು ಪ್ರಕೃತಿ - ಪುರುಷರ ಸಾಂಕೇತಿಕ ರೂಪ. ಗಂಡು ಒಂದು ಜೀವಿಯನ್ನು ತನ್ನಿಂದ ಹೊರಗೆ ಸೃಷ್ಟಿಸಿದಲ್ಲಿ, ಹೆಣ್ಣು ಅದೇ ಜೀವವನ್ನು ತನ್ನೊಳಗೆ ಸೃಷ್ಟಿಸುತ್ತಾಳೆ. ನವಮಾಸ ಗರ್ಭದಲ್ಲಿ ಹೊತ್ತು ಪೋಷಿಸುತ್ತಾಳೆ. ಈ ನಿಟ್ಟಿನಲ್ಲಿ ನನ್ನ ಧರ್ಮ ಹೇಳುವ ನುಡಿಗಳು ಐತರೇಯ ಉಪನಿಷತ್ತಿನಲ್ಲಿ ಹೀಗೆ ದಾಖಲಾಗಿದೆ.
"ಸಾ ಭಾವಯತ್ರೀ ಭಾವಯಿತವ್ಯಾಭವತಿ,
ತಂ ಸ್ತ್ರೀ ಗರ್ಭಂ ಬಿರ್ಭತಿ|
ಸೋಗ್ರ ಏವ ಕುಮಾರಂ ಜನ್ಮನೋಗ್ರೇಧಿ ಭಾವಯತಿ||"
ಅವಳು ನಿನ್ನ ಗರ್ಭವನ್ನು ದೇಹದಲ್ಲಿ ಧರಿಸಿ ನಿನ್ನ ಮರುಜನ್ಮಕ್ಕೆ ಕಾರಣಳಾಗಿರುವಳು. ಅವಳನ್ನು ಪೋಷಿಸುವುದು ನಿನ್ನ ಧರ್ಮ ಎನ್ನುವುದು ಇದರರ್ಥ.
ಉಪನಿಷತ್ ಗಳಲ್ಲಿ ಬರುವ ಶಾಂತಿ ಮಂತ್ರಗಳಾದರೋ ಅದು ಮನಸ್ಸನ್ನು ಮೀರಿದ ಬುದ್ಧಿ ಚೈತನ್ಯಕ್ಕೆ ಆಂತರ್ಯಕ್ಕೆ.
"ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಮೃತ್ಯೋಮ ಅಮೃದಂಗಮಯ
ಓಂ ಶಾಂತಿ, ಶಾಂತಿ, ಶಾಂತಿಃ"
ಅಸತ್ಯವಾದ ಈ ದೇಹ ಮನಸ್ಸಿಗೆ ಸದ್ಗತಿ ದೊರೆಯಲಿ,
ಕತ್ತಲ್ಲಿಂದ ಕೂಡಿದ ನನ್ನ ಮನೋಬುದ್ಧಿಗೆ ಬೆಳಕು ಒದಗಲಿ, ಮರ್ತ್ಯದೇಹವಾದರೂ ಅಮರ್ತ್ಯ ಆತ್ಮವಿದೆ ಮುಕ್ತಿಯ ಮೂಲಕ ಆ ಆತ್ಮಕ್ಕೆ ಅಮೃತತ್ವ ಒದಗಲಿ. ಓ, ಅಧಿಭೌತಿಕ, ಅಧ್ಯಾತ್ಮಿಕ, ಅಧಿದೈವಿಕ ಶಕ್ತಿಗಳೇ ಶಾಂತರಾಗಿ.
ಧರ್ಮ ಪುಸ್ತಕದ ಪುಟಗಳಲ್ಲಿ ವಿಜೃಂಭಿಸುವಂತದ್ದಲ್ಲ. ಅದು ನಿತ್ಯ ನಿರಂತರ ಆಚರಣೆಗೆ ಒದಗುವಂತದ್ದು. ನನ್ನ ಧರ್ಮ ಹೀಗೆ ದಿನ ನಿತ್ಯ ಆಚರಣೆಗೆ ನನ್ನನ್ನು ಒದಗಿಸಿ ನನ್ನೊಳಗೊಂದು ಸಂಸ್ಕಾರವನ್ನು ಸೃಷ್ಟಿಸಿದೆ. ನಮ್ಮ ಧರ್ಮ ನಮ್ಮ ಹೆಮ್ಮೆಯಲ್ಲವೇ?
            - ಭಾಸ್ಕರ ಮಾಳ್ವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ