ಸೋಮವಾರ, ಮಾರ್ಚ್ 19, 2018

*🕉ವೃಕ್ಷೋಪಾಸನೆ🕉*

*🕉ವೃಕ್ಷೋಪಾಸನೆ🕉*
ರಾಜ-ಮಹಾರಾಜರುಗಳು ವೃಕ್ಷೋಪಾಸನೆ ಮಾಡಿ ಮನೋಭಿಲಾಷೆಗಳನ್ನು ಈಡೇರಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಧಾರ್ಮಿಕ ಆಚರಣೆಯಲ್ಲಿ ವೃಕ್ಷಗಳಿಗೆ ಪೂಜನೀಯ ಸ್ಥಾನ ನೀಡುವ ಮೂಲಕ ಭಾರತೀಯ ಪರಂಪರೆ ಸಸ್ಯ-ವೃಕ್ಷ ಸಂಪತ್ತಿನ ರಕ್ಷಣೆಗೂ ಕಾರಣವಾಗಿದೆ. 
ಬಿಲ್ವಪತ್ರೆ ಶಿವನಿಗೆ, ತುಳಸಿ ವಿಷ್ಣುವಿಗೆ, ಗರಿಕೆ ಗಣಪತಿಗೆ ಪ್ರಿಯವಾಗಿರುವಂತೆ ಅಶ್ವತ್ಥ ವೃಕ್ಷ ನವಗ್ರಹಗಳ ಪೈಕಿ ಗುರು ಗ್ರಹಕ್ಕೆ ಸಂಬಂಧಿಸಿದ ವೃಕ್ಷವಾಗಿದೆ. ಈ ನಿಟ್ಟಿನಲ್ಲಿ ಗುರು ಗ್ರಹದ ಅನುಗ್ರಹಕ್ಕೆ ಪಾತ್ರರಾಗಬೇಕಾದರೆ ಅಶ್ವತ್ಥ ವೃಕ್ಷವನ್ನು ಪೂಜಿಸಬೇಕೆಂಬ ನಂಬಿಕೆ ಇದೆ.
ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹವನ್ನು ಪುತ್ರ ಕಾರಕ ಅಂದರೆ ಸಂತಾನ ಅಥವಾ ಪುತ್ರ ಪ್ರಾಪ್ತಿಗೆ ಸೂಚಕವಾದ ಗ್ರಹವೆಂದು ಹೇಳಲಾಗಿದೆ. ಆದ್ದರಿಂದಲೇ ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅಥವಾ ಸಂತಾನಕ್ಕೆ ಇಚ್ಛಿಸುವವರು ಗುರು ಗ್ರಹಕ್ಕೆ ಪ್ರಿಯವಾಗಿರುವ ಅಶ್ವತ್ಥ ವೃಕ್ಷವನ್ನು ಪೂಜಿಸಬೇಕೆಂದು ಹೇಳಲಾಗುತ್ತದೆ. ರಾಮಾಯಣದಲ್ಲಿಯೂ ಸಹ ಇದರ ಉಲ್ಲೇಖವಿದ್ದು, ಪುತ್ರಕಾಮೇಷ್ಟಿ ಯಾಗ ಮಾಡಿದ್ದ ದಶರಥ ಮಹಾರಾಜ ಸಹ ತನ್ನ ಪತ್ನಿಯರೊಂದಿಗೆ ಅಶ್ವತ್ಥ ವೃಕ್ಷಕ್ಕೆ ಪೂಜೆ ಸಲ್ಲಿಸಿ ಅನುಗ್ರಹ ಪಡೆದಿದ್ದ ಎಂಬ ಮಾಹಿತಿ ಇದೆ.
ಇನ್ನು ಸರ್ವಕಾಲಕ್ಕೂ ಸಲ್ಲುವ ಭಗವದ್ಗೀತೆಯಲ್ಲಿಯೂ ಅಶ್ವತ್ಥ ವೃಕ್ಷವನ್ನು ಬಣ್ಣಿಸಲಾಗಿದ್ದು, ಸಮಸ್ತ ವೃಕ್ಷಗಳಿಗೆ ಅಶ್ವತ್ಥ ವೃಕ್ಷವನ್ನು ರಾಜನನ್ನಾಗಿ ಪರಿಗಣಿಸಲಾಗಿದೆ. ಅಷ್ಟೇ ಅಲ್ಲದೇ ಉಪನಿಷತ್ ಗಳಲ್ಲೂ ಅಶ್ವತ್ಥ ವೃಕ್ಷದ ಬಗ್ಗೆ ಉಲ್ಲೇಖಗಳಿದ್ದು, ಕಠೋಪನಿಷತ್ತಿನಲ್ಲಿ ಸಂಸಾರವನ್ನು ಅಶ್ವತ್ಥವೃಕ್ಷಕ್ಕೆ ಹೋಲಿಸಲಾಗಿದೆ.  ಮೂಲತೋ ಬ್ರಹ್ಮ ರೂಪಾಯ ಮಧ್ಯತೋ ವಿಷ್ಣು ರೂಪಿಣೇ  ಅಗ್ರತಶ್ಯಿವರೂಪಾಯ ವೃಕ್ಷ ರಾಜಾಯತೇ ನಮಃ ಎಂಬ ಶ್ಲೋಕದ ಅರ್ಥದಂತೆ, ಜಗತ್ತಿನ ಸೃಷ್ಟಿ, ಸ್ಥಿತಿ, ಲಯದ ನಿಯಾಮಕರಾದ ಬ್ರಹ್ಮ ವಿಷ್ಣು ಮಹೇಶ್ವರರು ವೃಕ್ಷರಾಜ ಅಶ್ವತ್ಥ ವೃಕ್ಷದಲ್ಲಿ ನೆಲಿಸಿದ್ದು, ದೈವದ ಸಾನ್ನಿಧ್ಯ ಇರುವುದರಿಂದ ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಹಾಕುವುದರಿಂದ ಮನೋಭಿಲಾಶೆಗಳು ಈಡೇರುತ್ತವೆ
ತುಳಸಿ ಪೂಜೆ ನಡೆಸುವುದರ ಹಿಂದೆ ವೈದ್ಯಕೀಯ ಕಾರಣವಿರಬಹುದು ಎಂದು ಊಹಿಸಲಾಗುತ್ತದೆ. ಅದೇನೆಂದರೆ ತುಳಸಿ ಗಿಡಕ್ಕೆ ಆಮ್ಲಜನಕ ಬಿಡುಗಡೆ ಮಾಡುವ ರೋಗ ನಿರೋಧಕ ಶಕ್ತಿ ಮತ್ತು ಔಷಧಿ ಗುಣಗಳಿವೆ. ಈ ಹಿನ್ನೆಲೆಯಲ್ಲಿ ತುಳಸಿಯ ಗಿಡಕ್ಕೆ ಬೆಳಿಗ್ಗೆ ಎದ್ದು ಪೂಜೆ ಸಲ್ಲಿಸುವುದರಿಂದ ಉಸಿರಾಟಕ್ಕೆ ಶುದ್ಧ ಗಾಳಿ ಸಿಗುತ್ತದೆ. 
ವಾಸ್ತು ಪ್ರಕಾರವೂ ತುಳಸಿ ಮಹತ್ವ ಪಡೆದುಕೊಂಡಿದ್ದು, ಉತ್ತರ ಹಾಗೂ ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಉತ್ತಮ ಫಲಗಳು ದೊರೆಯುತ್ತದೆ, ಋಣಾತ್ಮಕ ಶಕ್ತಿಗಳಿಂದ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ಇದೆ. ಕೊನೆಯದಾಗಿ ಎಲ್ಲರಿಗೂ ತಿಳಿದಿರುವಂತೆ ದಿನ ಬೆಳಿಗ್ಗೆ 2-3 ತುಳಸಿ ಎಲೆಗಳನ್ನು ತಿನ್ನುವುದರಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ