ಸೋಮವಾರ, ಮಾರ್ಚ್ 19, 2018

*ಆಚಮನ*

*ಆಚಮನ*
_ಯಾವುದೇ ಶುಭಕರ್ಮದಲ್ಲಿ ಪುರೋಹಿತರು ಮೊದಲು ಹೇಳುವ ಕ್ರಿಯೆಯೇ ಆಚಮನ.  *ಚಮು ಅದನೇ* ಎಂಬ ಧಾತುವಿನಿಂದ ಹುಟ್ಟಿದ ಪದ. ಕುಡಿಯುವುದು ಅಥವಾ ತಿನ್ನುವುದು ಎಂಬ ಅರ್ಥದಲ್ಲಿ ಪ್ರಯೋಗ. ನೀರಾದ್ದರಿಂದ ಕುಡಿಯುವುದು ಸರಿಯಾಗುತ್ತದೆ._
_ಮೂರು ಬಾರಿ ದೇವರನ್ನು ಸ್ಮರಿಸಿ ಕರ್ಮಗಳ ಆರಂಭದಲ್ಲಿ ನೀರನ್ನು ಸೇವಿಸುವುದೇ ಆಚಮನ. ಇದಕ್ಕೆ ಕೆಲವು ನಿಯಮಗಳಿವೆ. *ಆಯತಂ ಪರ್ವಣಂ ಕೃತ್ವಾ ಗೋಕರ್ಣಾಕೃತಿಮತ್ಕರಮ್ ಸಂಹತಾಂಗುಲಿನಾ ತೋಯಂ* ಎಂದಿದ್ದಾರೆ ಭರದ್ವಾಜರು. ತೀರ್ಥ ತೆಗೆದುಕೊಳ್ಳುವ ರೀತಿಯಲ್ಲಿ ಕೈಯಲ್ಲಿ ಆಚಮನ ಮಾಡಬೇಕು. *ಮುಕ್ತ್ವಾಂಗುಷ್ಠ ಕನಿಷ್ಠಾಭ್ಯಾಂ ಶೇಷೇಣಾಚಮನಂ ಮಾಷಮಜ್ಜನಮಾತ್ರಾಸ್ತು ಸಂಗೃಹ್ಯ ತ್ರಿಃ ಪಿಬೇದಪಃ ದಕ್ಷಿಣೇನ* ಇದು ಮಾರ್ಕಂಡೇಯರ ಮಾತು. ಹೆಬ್ಬೆರಳು ಹಾಗೂ ಕೊನೆ ಬೆರಳನ್ನು ಬಿಟ್ಟು ಒಂದು ಉದ್ದಿನ ಕಾಳು ಮುಳುಗುವಷ್ಟು ನೀರನ್ನು ಸಂಗ್ರಹಿಸಿ ಮೂರು ಬಾರಿ ಬಲಗೈಯಲ್ಲಿ ಕುಡಿಯುವುದೇ ಆಚಮನ._
*ನೋಚ್ಛಿಷ್ಟಂ ತತ್ಪವಿತ್ರಂತು ಭುಕ್ತೋಚ್ಛಿಷ್ಟಂತು ವರ್ಜಯೇತ್ ಗ್ರಂಥಿರ್ಯಸ್ಯ ಪವಿತ್ರಸ್ಯ ನ ತೇನಾಚಮನಂ ಚರೇತ್*
_ಹಾರೀತರ ಮಾತು. ಹಾಗೆ ಕುಡಿದ ನೀರು ಎಂದಿಗೂ ಎಂಜಿಲಾಗದು. ಅದೇ ಉಳಿದ ಸಮಯದ ತಿಂದ ಎಂಜಲು ವರ್ಜ್ಯವೇ ಹೌದು. ಇನ್ನು ಪವಿತ್ರ ಹಾಕಿಕೊಂಡು ಆಚಮನ ಮಾಡಬಾರದು. ದೇವಲನ ಮತದಂತೆ ಕುಳಿತು ಸ್ವಸ್ತಿಕಾಸನದಲ್ಲೇ ಆಚಮನ ಮಾಡಬೇಕು. ( ಚಕ್ಕಳಮಕ್ಕಳ ಹಾಕಿಕೊಂಡು)_
*ನ ಬಹಿರ್ಜಾನುಸ್ತ್ವರಯಾ ನಾಸನಸ್ಥೋ ನ ಚೋತ್ಥಿತಃ ನ ಪಾದುಕಾಸ್ಥೋ ನಾ ಚಿತ್ತಃ ಶುಚಿಃ*
_ಮರೀಚಿಗಳ ಮಾತು. ಮಂಡಿಯ ಒಳಗಡೆಯೇ ಆಚಮನ ಮಾಡಬೇಕು. ಕೂತಾಗ ಮಂಡಿ ಮೀರಿ ನಮ್ಮ ಕೈ ಹೋಗಬಾರದು. ಇನ್ನು ಆಸನದಲ್ಲಿ ಇಲ್ಲದಿದ್ದಾಗ, ನಿಂತಾಗ, ಪಾದುಕೆ ಧರಿಸಿದ್ದಾಗ, ಮನಸ್ಸು ಕೆಡಿಸಿಕೊಂಡಿದ್ದಾಗ ಆಚಮನ ಮಾಡಬಾರದು._
*ಆರ್ದ್ರವಾಸಾ ಜಲೇ ಕುರ್ಯಾತ್ ತರ್ಪಣಾಚಮನಂ ಜಪಮ್ ಶುಷ್ಕವಾಸಾ ಸ್ಥಲೇ ಕುರ್ಯಾತ್ ತರ್ಪಣಾಚಮನಂ ಜಪಮ್*
_ಕಾತ್ಯಾಯನರ ಮಾತು.ಒದ್ದೆ ಬಟ್ಟೆ ಉಟ್ಟಾಗ ನೀರಿನ ಒಳಗಿದ್ದುಕೊಂಡು ಆಚಮನವೇ ಮೊದಲಾದವುಗಳನ್ನು ಮಾಡಬೇಕು. ಹೊರಗಿದ್ದಾಗ ಒಣಗಿದ ಬಟ್ಟೆಯಲ್ಲಿ ಇವೆಲ್ಲವನ್ನೂ ಮಾಡಬೇಕು._
*ಹೋಮೇ ಭೋಜನ ಕಾಲೇ ಚ ಸಂಧ್ಯಯೋರುಭಯೋರಪಿ ಆಚಾಂತಃ ಪುನರಾಚಾಮೇತ್ ಅನ್ಯತ್ರಾಪಿ ಸಕೃತ್ ಸಕೃತ್ ದ್ವಿರಾಚಮ್ಯ ತತಃ ಶುದ್ಧಃ ಸ್ಮೃತ್ವಾ ವಿಷ್ಣುಂ ಸನಾತನಮ್*
_ಹೋಮ ಮಾಡುವಾಗ,ಊಟ ಮಾಡುವಾಗ, ಸಂಧ್ಯಾ ಸಮಯದಲ್ಲಿ, ಎರಡೆರಡು ಬಾರಿ ಆಚಮನ ಮಾಡಬೇಕು. *ಕರ್ಮಾದೌ ಕರ್ಮಾಂತೇ ಚ ದ್ವಿರಾಚಮನಂ* ಎಂಬ ಮಾತೂ ಇದೆ. ಉಳಿದ ಸಂದರ್ಭದಲ್ಲಿ ಒಂದೇ ಆಚಮನ ಸಾಕಾಗುತ್ತದೆ. ದೇವರ ಸ್ಮರಣೆಯೇ ಪ್ರಮುಖ ಉದ್ದೇಶ ಈ ಆಚಮನದಲ್ಲಿ ಆಗಿರುತ್ತದೆ. ಹಾಗಾಗಿಯೇ ಯಾವುದಾದರೂ ಮೂರು ಹೆಸರು ಹೇಳಿ ನೀರು ಕುಡಿದು ಪವಿತ್ರರಾಗಿ ಕರ್ಮಗಳಿಗೆ ಸಿದ್ಧರಾಗುವುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ